ಬೈಲಹೊಂಗಲ : ದಿನನಿತ್ಯದ ಜಗಳ–ತಕರಾರು, ದೂರು–ವಿಚಾರಣೆಗಳಿಂದ ಗಂಭೀರ ವಾತಾವರಣ ಹೊಂದಿರುವ ನಗರದ ಪೊಲೀಸ್ ಠಾಣೆ ಗುರುವಾರ ಭಕ್ತಿಭಾವ, ಸೌಹಾರ್ದತೆ ಹಾಗೂ ಸಂಭ್ರಮದಿಂದ ಕಂಗೊಳಿಸಿತು.
ಗಣೇಶ ಚತುರ್ಥಿ ಹಾಗೂ ಸತ್ಯನಾರಾಯಣ ಪೂಜೆಯ ಅಂಗವಾಗಿ ಬೈಲಹೊಂಗಲ ಪೊಲೀಸ್ ಠಾಣೆಯ ಆವರಣದಲ್ಲಿ ಗಣಪತಿ ಬಪ್ಪನಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಡಾ. ಮಹಾಂತಯ್ಯ ಶಾಸ್ತ್ರೀ ಆರಾದ್ರಿಮಠ ಅವರು ಪೂಜಾ ವಿಧಿ–ವಿಧಾನಗಳನ್ನು ನೆರವೇರಿಸಿದರು.
ಭಕ್ತಿ ಗೀತೆಗಳ ಗಾಯನದಿಂದ ಠಾಣೆಯ ವಾತಾವರಣವೇ ಪಾವನಗೊಂಡಿತ್ತು. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸ್ ಮಿತ್ರರು ಪೂಜೆಯಲ್ಲಿ ಭಕ್ತಿಭಾವದಿಂದ ಪಾಲ್ಗೊಂಡು ಗಣಪತಿಗೆ ನಮನ ಸಲ್ಲಿಸಿದರು.
ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವಂತೆ ಪೊಲೀಸ್ ಸಿಬ್ಬಂದಿಯೆಲ್ಲರೂ ಒಂದೇ ರೀತಿಯ ಉಡುಪು ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷ ಗಮನ ಸೆಳೆಯಿತು. ಎಲ್ಲರೂ ಒಗ್ಗಟ್ಟಿನಿಂದ ಸಂಭ್ರಮಿಸಿ, ಸಾಮೂಹಿಕವಾಗಿ ಛಾಯಾಚಿತ್ರ ತೆಗೆಸಿಕೊಂಡು ಹಬ್ಬದ ಸಡಗರವನ್ನು ಸ್ಮರಣೀಯವಾಗಿಸಿಕೊಂಡರು.
ಇದೇ ವೇಳೆ ಪೊಲೀಸ್ ಸಿಬ್ಬಂದಿಯೇ ಕನ್ನಡ ಚಲನಚಿತ್ರ ಗೀತೆಗಳನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು. ಕರ್ತವ್ಯದ ಒತ್ತಡದ ನಡುವೆಯೂ ಸಿಬ್ಬಂದಿಯಲ್ಲಿನ ಕಲಾ ಪ್ರತಿಭೆ ಅನಾವರಣಗೊಂಡಿದ್ದು, ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದಿತು.
ಕಾರ್ಯಕ್ರಮದಲ್ಲಿ ಸಿಪಿಐ ಪ್ರಮೋದ ಯಲಿಗಾರ, ಪಿಎಸ್‌ಐ ವಾಹಿದ್ ಯಾದವಾಡ, ಶಿವನಗೌಡ ಭಾವಿಕಟ್ಟಿ, ಬಸವರಾಜ ಜಾಲಾಪುರ, ಪೊಲೀಸ್ ಸಿಬ್ಬಂದಿ, ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಪರಸ್ಪರ ಸೌಹಾರ್ದತೆ ಮತ್ತು ಏಕತೆಯ ಸಂದೇಶ ಸಾರಿದರು. ಕಾರ್ಯಕ್ರಮದ ಬಳಿಕ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.
Kshetra Samachara
17/09/2026 07:45 pm
LOADING...