ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

​ಮಂಗಳೂರು: ಶಕ್ತಿ ಸಂಶೋಧನೆ & ತರಬೇತಿ ಕೇಂದ್ರ ಉದ್ಘಾಟನೆ

​ಮಂಗಳೂರು: ನಗರದ ಶಕ್ತಿ ನಗರದಲ್ಲಿರುವ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಎಚ್‌ಪಿಸಿಎಲ್ (HPCL) ಸಂಸ್ಥೆಯ ಸಿಎಸ್‌ಆರ್ ಸಹಯೋಗದೊಂದಿಗೆ ನೂತನವಾಗಿ ನಿರ್ಮಾಣಗೊಂಡ ‘ಶಕ್ತಿ ಸಂಶೋಧನೆ ಮತ್ತು ತರಬೇತಿ ಕೇಂದ್ರ’ದ ಉದ್ಘಾಟನೆ ಸಮಾರಂಭವು ಶನಿವಾರ ನಡೆಯಿತು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ರಿಬ್ಬನ್ ಕತ್ತರಿಸಿ, ನಾಮಫಲಕ ಅನಾವರಣಗೊಳಿಸುವ ಮೂಲಕ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು.

ಬಳಿಕ ಎಚ್‌ಪಿಸಿಎಲ್ ಸಂಸ್ಥೆಯ ಹೆಚ್‌ಆರ್ ನಿರ್ದೇಶಕರಾದ ಕೆ.ಎಸ್. ಶೆಟ್ಟಿ ಅವರು ತರಬೇತಿ ಕೇಂದ್ರದ ಕೊಠಡಿಯನ್ನು ಉದ್ಘಾಟಿಸಿ, ದೀಪ ಬೆಳಗಿಸಿದರು. ಇದೇ ವೇಳೆ ಸುಮಾರು 100 ಕಂಪ್ಯೂಟರ್‌ಗಳನ್ನೊಳಗೊಂಡ ಸುಸಜ್ಜಿತ ಪ್ರಯೋಗಾಲಯವನ್ನು ಎಚ್‌ಪಿಸಿಎಲ್ ಸಿಎಸ್‌ಆರ್‌ನ ಸಿಜಿಎಂ ಅನುಪಮ್ ತಿವಾರಿ ಲೋಕಾರ್ಪಣೆಗೊಳಿಸಿದರು.

​ನಂತರ ಮಾತನಾಡಿದ ಸಂಸದ ಬ್ರಿಜೇಶ್ ಚೌಟ, "ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಹಾಗೂ ಶಿಕ್ಷಕರು ರಾಜ್ಯದ ಶಿಕ್ಷಣ ನೀತಿಗಳನ್ನು ಪರಿಣಾಮಕಾರಿಯಾಗಿ ಮತ್ತು ಅದರ ನೈಜ ಆಶಯದೊಂದಿಗೆ ಅನುಷ್ಠಾನಗೊಳಿಸುವ ಸಾಮರ್ಥ್ಯ ಬೆಳೆಸಿಕೊಳ್ಳಲು ಈ ಸಂಸ್ಥೆ ಪ್ರಮುಖ ಶಕ್ತಿ ಕೇಂದ್ರವಾಗಿ ರೂಪುಗೊಳ್ಳಬೇಕು. ಮಂಗಳೂರಿನ ಶಿಕ್ಷಣ ಕ್ಷೇತ್ರವು ಹೊಸ ಆಲೋಚನೆಗಳನ್ನು ಅಳವಡಿಸಿಕೊಂಡು, ಅವುಗಳನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ ಶಕ್ತಿ ವಿದ್ಯಾ ಸಂಸ್ಥೆಯು ಮುಂಚೂಣಿಯಲ್ಲಿ ನಿಲ್ಲಬೇಕು" ಎಂದು ಆಶಯ ವ್ಯಕ್ತಪಡಿಸಿದರು.

​ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, "2047ರ ವೇಳೆಗೆ ಭಾರತವನ್ನು ವಿಕಸಿತ/ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ಪ್ರಧಾನಮಂತ್ರಿಯವರ ಸಂಕಲ್ಪವಾಗಿದೆ. ಈ ಕನಸನ್ನು ನನಸು ಮಾಡುವಲ್ಲಿ ಯುವಜನತೆ ಹಾಗೂ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಪ್ರಮುಖವಾದುದು" ಎಂದರು.

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಕ್ತಿ ವಿದ್ಯಾ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಕೆ.ಸಿ. ನಾಯಕ್ ವಹಿಸಿದ್ದರು.

​ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಎಚ್‌ಪಿಸಿಎಲ್ ನಿರ್ದೇಶಕ ಕೆ.ಎಸ್. ಶೆಟ್ಟಿ, ಶಕ್ತಿ ವಿದ್ಯಾ ಸಂಸ್ಥೆಯ ಟ್ರಸ್ಟಿ ಸುಗುಣ ಸಿ. ನಾಯಕ್, ಪ್ರಧಾನ ಸಲಹೆಗಾರ ರಮೇಶ್ ಕೆ. ಹಾಗೂ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Edited By : Vinayak Patil
PublicNext

PublicNext

19/09/2026 08:54 pm

Cinque Terre

6.47 K

Cinque Terre

0