ಹುಬ್ಬಳ್ಳಿ: ಉತ್ತರ ಕರ್ನಾಟಕದ ಭಾಗದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿ ಸಾಕಷ್ಟು ಹೆಸರನ್ನು ಮಾಡಿದೆ. ಬೆಳಗಾವಿ ಭಾಗದ ಜನರಿಗೆ ವರವಾಗಿರುವ ಕೆಎಲ್ಇ ಈಗ ಗಂಡುಮೆಟ್ಟಿನ ನಾಡಿನಲ್ಲಿ ಹೊಸ ಅಧ್ಯಾಯ ಆರಂಭಿಸಿದೆ. ಹುಬ್ಬಳ್ಳಿಯ ಪ್ರತಿಷ್ಠಿತ ಮೂರುಸಾವಿರ ಮಠದ ನೇತೃತ್ವದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಆಸ್ಪತ್ರೆಗೆ ಮುನ್ನುಡಿ ಬರೆದಿದೆ.
ಭವ್ಯವಾದ ಮುಗಿಲೆತ್ತರದ ಕಟ್ಟಡ, ಹೊಸ ತಂತ್ರಜ್ಞಾನದ ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ. 22ನೇ ಶತಮಾನಕ್ಕೆ ಪೂರಕವಾದ ರೀತಿಯಲ್ಲಿ ಕೆಎಲ್ಇ ವಿನೂತನ ರೀತಿಯ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣ ಮಾಡಿದ್ದು, ಈಗ ಭವ್ಯವಾಗಿ ಲೋಕಾರ್ಪಣೆಗೊಂಡಿದೆ. ಹೌದು.. ಉತ್ತರ ಕರ್ನಾಟಕದ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಬಲ ನೀಡುವ ಉದ್ದೇಶದಿಂದ ಹುಬ್ಬಳ್ಳಿಯ ಗಬ್ಯೂರಿನಲ್ಲಿ ನಿರ್ಮಿಸಲಾಗಿರುವ ಕೆಎಲ್‌ಇ ಜಗದ್ಗುರು ಗಂಗಾಧರ ಮಹಾಸ್ವಾಮೀಜಿ ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯದ ನೂತನ ಶೈಕ್ಷಣಿಕ ಕಟ್ಟಡ ಹಾಗೂ 1,200 ಹಾಸಿಗೆಗಳ ಕೆಎಲ್‌ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅನುಪಸ್ಥಿತಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಶರಣಪ್ರಕಾಶ ಪಾಟೀಲ ಸೇರಿದಂತೆ ಗಣ್ಯರು ವಿದ್ಯುಕ್ತವಾಗಿ ಲೋಕಾರ್ಪಣೆಗೊಳಿಸಿದ್ದಾರೆ. ಮೂರುಸಾವಿರಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಜನಸೇವೆಗೆ ಸಮರ್ಪಿಸಿದ್ದಾರೆ. ಮೂರುಸಾವಿರಮಠದಿಂದ ದಾನವಾಗಿ ನೀಡಲಾದ ಭೂಮಿಯಲ್ಲಿ 50 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಸಮಗ್ರ ವೈದ್ಯಕೀಯ ಕ್ಯಾಂಪಸ್‌ಗೆ ಸುಮಾರು 700 ಕೋಟಿ ರೂ ಹೂಡಿಕೆ ಮಾಡಲಾಗಿದೆ. 30 ಲಕ್ಷ ಚದರ ಅಡಿಗೂ ಅಧಿಕ ನಿರ್ಮಿತ ಪ್ರದೇಶ ಹೊಂದಿರುವ ಕ್ಯಾಂಪಸ್‌ನಲ್ಲಿ ವೈದ್ಯಕೀಯ ಶಿಕ್ಷಣ, ಅತ್ಯಾಧುನಿಕ ಚಿಕಿತ್ಸೆ ಹಾಗೂ ಸಂಶೋಧನೆಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇಂತಹದೊಂದು ಕಾರ್ಯವನ್ನು ಕೇಂದ್ರ ಸಚಿವರು ಹಾಡಿ ಹೊಗಳಿದ್ದಾರೆ.
ಇನ್ನೂ 2021ರಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗದ ಅನುಮೋದನೆ ಪಡೆದ ವೈದ್ಯಕೀಯ ಕಾಲೇಜು 2022ರಲ್ಲಿ ಮೊದಲ ಬ್ಯಾಚ್ ಆರಂಭಿಸಿದೆ. ಪ್ರಸಕ್ತ ಸುಮಾರು 800 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು, MBBS ಪ್ರವೇಶ ಸಾಮರ್ಥ್ಯವನ್ನು 200 ಕ್ಕೆ ಹೆಚ್ಚಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ 20 ವಿಭಾಗಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ. 2025ರ ಜ.1ರಿಂದಲೇ 1,200 ಹಾಸಿಗೆಗಳ ಆಸ್ಪತ್ರೆ ಕಾರ್ಯಾರಂಭ ಮಾಡಿದ್ದು, ಮಲ್ಟಿ-ಸ್ಪೆಷಾಲಿಟಿ ಹಾಗೂ ಸೂಪರ್-ಸ್ಪೆಷಾಲಿಟಿ ಚಿಕಿತ್ಸಾ ಸೇವೆಗಳನ್ನು ನೀಡುತ್ತಿದೆ. ತುರ್ತು ಮತ್ತು ಟ್ರಾಮಾ ಸೇವೆ, ಐಸಿಯು, ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿಗಳು, ಪ್ರಯೋಗಾಲಯ ಮತ್ತು ರೋಗನಿರ್ಣಯ ಸೌಲಭ್ಯಗಳ ಜೊತೆಗೆ ನ್ಯೂರಾಲಜಿ, ನ್ಯೂರೋಸರ್ಜರಿ, ನೆಫ್ರಾಲಜಿ, ಗ್ಯಾಸ್ಟ್ರೋಎಂಟರಾಲಜಿ, ಯುರಾಲಜಿ ಹಾಗೂ ಎಂಡೋಕ್ರೈನಾಲಜಿ ಸೇರಿದಂತೆ ಹಲವು ಸೂಪರ್-ಸ್ಪೆಷಾಲಿಟಿ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಕಾರ್ಡಿಯಾಲಜಿ, ಆಂಕಾಲಜಿ ಹಾಗೂ ಅಂಗಾಂಗ ಕಸಿ ಸೇವೆಗಳನ್ನು ಮುಂದಿನ ಹಂತದಲ್ಲಿ ಆರಂಭಿಸುವ ಉದ್ದೇಶವಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಹಾಗೂ ಸಬ್ಸಿಡಿ ದರದಲ್ಲಿ ಚಿಕಿತ್ಸೆ, ಆರೋಗ್ಯ ಶಿಬಿರಗಳು ಮತ್ತು ಸರ್ಕಾರಿ ಆರೋಗ್ಯ ಯೋಜನೆಗಳಡಿ ಸೇವೆ ನೀಡಲಾಗುತ್ತಿದೆ. ಈ ಕ್ಯಾಂಪಸ್ ಉತ್ತರ ಕರ್ನಾಟಕದ ವೈದ್ಯಕೀಯ ಶಿಕ್ಷಣ, ಸುಧಾರಿತ ಆರೋಗ್ಯ ಸೇವೆ ಹಾಗೂ ಸಂಶೋಧನೆಯ ಪ್ರಮುಖ ಕೇಂದ್ರವಾಗಿ ಬೆಳೆಯಲಿದೆ.
ಒಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದ ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಆಶಯದೊಂದಿಗೆ ಆರಂಭಗೊಂಡಿರುವ ಆಸ್ಪತ್ರೆ ಹಾಗೂ ಕಾಲೇಜಿನ ಜರ್ನಿ ಶುಭವಾಗಲಿ ಎಂಬುವುದು ನಮ್ಮ ಆಶಯ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/09/2026 09:47 pm