ಧಾರವಾಡ : ಯುವಜನರು ಸ್ವಾರ್ಥವನ್ನು ಬದಿಗಿಟ್ಟು ನಿಸ್ವಾರ್ಥ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಉತ್ತಮ ನಡವಳಿಕೆ, ಸಹಕಾರ ಹಾಗೂ ಸಹಬಾಳ್ವೆಯ ಮನೋಭಾವ ಅಗತ್ಯ ಎಂದು ಹೋರಾಟಗಾರ ಹಾಗೂ ಹಿರಿಯ ನ್ಯಾಯವಾದಿ ಬಿ.ಡಿ. ಹಿರೇಮಠ ಹೇಳಿದರು.
ಧಾರವಾಡದ ಹಳಿಯಾಳ ನಾಕಾ ಸರ್ಕಲ್‌ನಲ್ಲಿ ಶ್ರೀ ಗಜಾನನ ಉತ್ಸವ ಸಮಿತಿಯ 25ನೇ ವರ್ಷದ ಬೆಳ್ಳಿಹಬ್ಬದ ಅಂಗವಾಗಿ ನಡೆದ ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂವಿಧಾನ ಎಲ್ಲರಿಗೂ ಹಕ್ಕುಗಳನ್ನು ನೀಡಿದ್ದು, ಜಾತಿ-ಭೇದ ಮರೆತು ಎಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಯುವಕರು ಹೋರಾಟದ ಮನೋಭಾವದ ಜತೆಗೆ ಕೂಡಿ ಬಾಳುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಸಮಾಜ ಸೇವಕ ಗಂಗಾಧರ ಹಿರೇಮಠ ಮಾತನಾಡಿ, ದೇಶದ ಭವಿಷ್ಯ ಯುವಜನರ ಕೈಯಲ್ಲಿದೆ. ಬಾಲಗಂಗಾಧರ ತಿಲಕರ ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು’ ಎಂಬ ಧ್ಯೇಯದಂತೆ, ದೇಶಭಕ್ತಿಯೇ ನಮ್ಮ ಜನ್ಮಸಿದ್ಧ ಹಕ್ಕು ಎಂಬ ಆಶಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ. ದೇಶದ ಏಕತೆ, ಸಂಸ್ಕೃತಿ ಹಾಗೂ ದೇಶಭಕ್ತಿ ನಮ್ಮ ಉಸಿರಾಗಬೇಕು ಎಂದರು.
ಸಾಹಿತಿ ಸಂಗಮನಾಥ ಲೋಕಾಪುರ ಮಾತನಾಡಿ, ಯುವಜನರಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಬೇಕು. ಅಭಿವೃದ್ಧಿಯ ಜತೆಗೆ ಆಲೋಚನೆಗಳಲ್ಲೂ ಬದಲಾವಣೆ ಅಗತ್ಯ. ಹಿರಿಯರು ಹಾಗೂ ಗುರುಗಳನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಸಮಾಜ ಸೇವಕ ಬಸವರಾಜ ಹಲಗಲಿ, ಡಾ. ಎಂ.ಎಂ. ಹಿರೇಮಠ, ಕೆ.ಎಚ್. ಖಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸೈನಿಕರು, ರೈತರು, ಆರಕ್ಷಕರು, ಅಡುಗೆ ಸಹಾಯಕರು, ಪೌರ ಕಾರ್ಮಿಕರು, ಸಾಧಕ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಶ್ರಮಿಕ ಜೀವಿಗಳನ್ನು ಸನ್ಮಾನಿಸಲಾಯಿತು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/09/2026 01:08 pm
LOADING...