ಬೆಂಗಳೂರು: ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಮನೆಯಲ್ಲಿ ಈ ವಾರ ವೀಕೆಂಡ್ ಪಂಚಾಯಿತಿ ರಣರೋಚಕ ತಿರುವು ಪಡೆದುಕೊಂಡಿದೆ. ನಾಮಿನೇಷನ್ ಪ್ರಕ್ರಿಯೆ ವೇಳೆ ಸಹಸ್ಪರ್ಧಿ ಸೌಂದರ್ಯ ಶೆಟ್ಟಿ ವಿರುದ್ಧ ನಾಲಿಗೆ ಹರಿಬಿಟ್ಟು, "ಕ್ಯಾರೆಕ್ಟರ್‌ಲೆಸ್" ಎಂದು ನಿಂದಿಸಿದ್ದ ಮಾಡರ್ನ್ ಮಹಾಕವಿ ಮಂಜುಗೆ ನಿರೂಪಕ ಕಿಚ್ಚ ಸುದೀಪ್ ಸರಿಯಾಗಿಯೇ ಚಳಿ ಬಿಡಿಸಿದ್ದಾರೆ.
ಹೌದು ವಾರದ ನಾಮಿನೇಷನ್ ಸಂದರ್ಭದಲ್ಲಿ ಮಂಜು ಅವರು ಸೌಂದರ್ಯ ಶೆಟ್ಟಿ ಅವರ ವೈಯಕ್ತಿಕ ನಡತೆಯನ್ನೇ ಪ್ರಶ್ನಿಸಿ ವಿವಾದ ಹುಟ್ಟುಹಾಕಿದ್ದರು. "ನಾನು ಇಲ್ಲಿ ಕೈ-ಕೈ ಹಿಡ್ಕೊಂಡು ರೊಮ್ಯಾನ್ಸ್ ಮಾಡೋಕೆ ಬಂದಿಲ್ಲ, ಈ ರೀತಿ ಮಾಡಿಕೊಂಡಿದ್ದರೆ ಕ್ಯಾರೆಕ್ಟರ್‌ಲೆಸ್ ಅಂತಾರೆ" ಎಂದು ಆಕ್ರೋಶ ಹೊರಹಾಕಿದ್ದರು. ಈ ಮಾತುಗಳು ಮನೆಯಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿದ್ದವು.
ಮಂಜುಗೆ ಸುದೀಪ್ ಕ್ಲಾಸ್ – ಕಣ್ಣೀರಿಟ್ಟ ಸೌಂದರ್ಯ
'ಸೂಪರ್ ಸಂಡೇ ವಿತ್ ಸುದೀಪ' ಎಪಿಸೋಡ್‌ನಲ್ಲಿ ಈ ವಿಚಾರವನ್ನು ಕೈಗೆತ್ತಿಕೊಂಡ ಕಿಚ್ಚ, ಮಂಜು ಅವರ ನಡತೆಯನ್ನು ಕಟುವಾಗಿ ಟೀಕಿಸಿದರು. "ನಾಮಿನೇಟ್ ಮಾಡುವಾಗ ನೀವು ಏನೇನು ಮಾತನಾಡಿದ್ರಿ? ಮಾತಿನ ಮೇಲೆ ನಿಗಾ ಇರಲಿ. ನೀವು ಆಡಿದ ಮಾತುಗಳು ಇನ್ನೊಬ್ಬರ ಮನಸ್ಸಿಗೆ ಎಷ್ಟು ನೋವು ಉಂಟುಮಾಡುತ್ತದೆ ಎನ್ನುವ ಕನಿಷ್ಠ ಪ್ರಜ್ಞೆ ಬೇಡವೇ?" ಎಂದು ನೇರವಾಗಿಯೇ ಗ್ರಹಚಾರ ಬಿಡಿಸಿದರು. ಈ ವೇಳೆ ಸೌಂದರ್ಯ ಶೆಟ್ಟಿ ಅವರು ಕಣ್ಣೀರಿಡುತ್ತಾ, "ಆ ಕ್ಷಣದಲ್ಲಿ ನನಗೆ ಏನು ಮಾಡಬೇಕೆಂದು ತೋಚಲಿಲ್ಲ, ನಿಮ್ಮ ಬೆಂಬಲ ಬೇಕಿತ್ತು" ಎಂದು ವೇದಿಕೆ ಮುಂದೆ ನೋವು ತೋಡಿಕೊಂಡಿದ್ದಾರೆ.
ಕೇವಲ ಮಂಜು ಅಷ್ಟೇ ಅಲ್ಲದೆ, ಕ್ಯಾಪ್ಟನ್ ಸಂಗೀತಾ ಭಟ್, ಕಿರಣ್ ಶಾಸ್ತ್ರಿ, ಧನುಷ್ ಹಾಗೂ ಲಿಖಿತ್ ಅವರಿಗೂ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಲೇಡಿಸ್ ವಾಶ್‌ರೂಮ್‌ನಲ್ಲಿ ನೀರು ಪೋಲಾಗುತ್ತಿದ್ದನ್ನು ತಿಳಿಸಲು ಬಂದ ಜಗದೀಶ್ ಅವರನ್ನು ಬೆಂಬಲಿಸದೆ, ಅವರ ಮೇಲೆಯೇ ಕೂಗಾಡಿದ್ದನ್ನು ಪ್ರಶ್ನಿಸದ ಕ್ಯಾಪ್ಟನ್ ಸಂಗೀತಾ ಅವರ ನಿಷ್ಕ್ರಿಯತೆಯನ್ನು ಕಿಚ್ಚ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಂಗೀತಾ, ಇನ್ನೊಮ್ಮೆ ಇಂತಹ ತಪ್ಪು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಸ್ಪಷ್ಟಪಡಿಸಿದರು.
‘ಇನ್ನು ನಮಗೆ ಅಗ್ನಿಪರೀಕ್ಷೆ ಬೇಡ’ – ಸುದೀಪ್ ಖಡಕ್ ಮಾತು
ಮನೆಯಲ್ಲಿನ ಗೊಂದಲ ಹಾಗೂ ಅಶಿಸ್ತಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸುದೀಪ್, "ಮುಂದಿನ ದಿನಗಳಲ್ಲಿ ನಮಗೆ ಇಂತಹ ಅಗ್ನಿಪರೀಕ್ಷೆಗಳು ಬೇಡ. ನಾಲ್ಕು ಜನರ ದುರ್ವರ್ತನೆಯಿಂದ ಅಪಾರ ಸಂಖ್ಯೆಯ ವೀಕ್ಷಕರನ್ನು ಕಳೆದುಕೊಳ್ಳಲು ನಾವು ಸಿದ್ಧರಿಲ್ಲ" ಎಂದು ಸ್ಪರ್ಧಿಗಳಿಗೆ ಸ್ಪಷ್ಟ ಎಚ್ಚರಿಕೆ ರವಾನಿಸಿದ್ದಾರೆ.
PublicNext
20/09/2026 01:30 pm