ಮುಂಬೈ : ತಮ್ಮ ವಯಸ್ಸು, ದೇಹದ ತೂಕ ಹಾಗೂ ಲುಕ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಅಪಹಾಸ್ಯ ಮಾಡುತ್ತಿರುವ ಆನ್‌ಲೈನ್ ಟ್ರೋಲಿಗರಿಗೆ ಬಾಲಿವುಡ್ ‘ಸುಲ್ತಾನ್’ ಸಲ್ಮಾನ್ ಖಾನ್ ನೇರವಾಗಿಯೇ ಸವಾಲೆಸೆದಿದ್ದಾರೆ. ‘ಬಿಗ್‌ಬಾಸ್ 20’ರ ‘ವೀಕೆಂಡ್ ಕಾ ವಾರ್’ ಸಂಚಿಕೆಯಲ್ಲಿ ವೇದಿಕೆಯ ಮೇಲೆಯೇ ಜಾಕೆಟ್, ಟೋಪಿ ಹಾಗೂ ಮುಖದ ಮೇಕಪ್ ತೆಗೆದು, "ಇಲ್ಲೇ ಇದ್ದೇನೆ, ತಾಕತ್ತಿದ್ದರೆ ಈಗ ಟ್ರೋಲ್ ಮಾಡಿ" ಎಂದು ಸಲ್ಮಾನ್ ಖಾನ್ ಆಕ್ರೋಶ ಹೊರಹಾಕಿದ್ದಾರೆ.
ಸ್ಪರ್ಧಿ ಸ್ಕೌಟ್ ಜೊತೆಗಿನ ಸಂಭಾಷಣೆಯ ವೇಳೆ ಆನ್‌ಲೈನ್ ಟ್ರೋಲಿಂಗ್ ವಿಷಯವನ್ನು ಪ್ರಸ್ತಾಪಿಸಿದ ಸಲ್ಮಾನ್, "ನೀವು ಜನರನ್ನು ಯಾಕೆ ಟ್ರೋಲ್ ಮಾಡುತ್ತೀರಿ? ಇದರ ಹಿಂದಿರುವ ಮನಸ್ಥಿತಿಯಾದರೂ ಎಂಥದ್ದು? 'ಭಾಯ್ ದಪ್ಪವಾಗಿದ್ದಾರೆ' ಎಂದು ನನ್ನನ್ನೂ ಟ್ರೋಲ್ ಮಾಡುತ್ತಾರೆ. ಹಾಗಿದ್ದರೆ ಮಾಡಿಕೊಳ್ಳಿ ಟ್ರೋಲ್" ಎಂದು ಹೇಳುತ್ತಾ ಧರಿಸಿದ್ದ ಟೋಪಿ ಮತ್ತು ಜಾಕೆಟ್ ಅನ್ನು ಕಳಚಿ ಎಸೆದರು. ಅಷ್ಟಕ್ಕೇ ನಿಲ್ಲದೆ, ತಮ್ಮ ಮುಖದ ಮೇಕಪ್ ಅನ್ನೂ ಒರೆಸಿ ಕ್ಯಾಮೆರಾ ಮುಂದೆ ಮುಖ ತೋರುತ್ತಾ, "ಇಗೋ ಈಗ ಎಷ್ಟು ಬೇಕಾದರೂ ಟ್ರೋಲ್ ಮಾಡಿ" ಎಂದು ಗುಡುಗಿದರು.
ವೈಯಕ್ತಿಕವಾಗಿ ಅವಹೇಳನ ಮಾಡುವವರ ವಿರುದ್ಧ ಹರಿಹಾಯ್ದ ಸಲ್ಮಾನ್, "ಇನ್ನೊಬ್ಬರ ಬಗ್ಗೆ ಮಾತನಾಡುವ ಮುನ್ನ ನಿಮ್ಮ ಮುಖ, ನಿಮ್ಮ ದೇಹವನ್ನು ಒಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಿ. ನಿಮ್ಮ ತಂದೆ-ತಾಯಿಯ ಆರೋಗ್ಯದ ಕಡೆ ಗಮನಹರಿಸಿ. ಅಭಿಮಾನಿಗಳು ಪ್ರೀತಿಯಿಂದ 'ಭಾಯ್, ತೂಕದ ಬಗ್ಗೆ ಗಮನಕೊಡಿ' ಎಂದರೆ ಅರ್ಥ ಮಾಡಿಕೊಳ್ಳಬಹುದು. ಆದರೆ ವಿಕೃತವಾಗಿ ಅಪಹಾಸ್ಯ ಮಾಡುವುದು ಸರಿಯಲ್ಲ. ನಾನು ಮುಂದಿನ ವಾರ ಹರಿದ ಶೂ ಧರಿಸಿಯೇ ಬರುತ್ತೇನೆ, ಅದಕ್ಕೂ ಟ್ರೋಲ್ ಮಾಡಿಕೊಳ್ಳಿ" ಎಂದು ಕಿಡಿಕಾರಿದರು.
ಸಹೋದರ ಸೊಹೈಲ್ ಖಾನ್ ಹಾಗೂ ನಟ ವರುಣ್ ಧವನ್ ಅವರನ್ನೂ ಇಂತಹ ಟ್ರೋಲಿಗರು ಬಿಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಮ್ಮ ಬೋಳು ತಲೆಯ ಕುರಿತು ಹರಿದಾಡಿದ ವದಂತಿಗಳಿಗೂ ಸ್ಪಷ್ಟನೆ ನೀಡಿದ ನಟ, "ನಾನು ಹೇರ್ ಟ್ರಾನ್ಸ್‌ಪ್ಲಾಂಟ್ ಮಾಡಿಸಿಕೊಳ್ಳುತ್ತಿದ್ದೇನೆ ಎಂದು ಕೆಲವರು ಸುಳ್ಳು ಹಬ್ಬಿಸಿದರು. ಆದರೆ ಅದು ಕೇವಲ ಸಿನಿಮಾದ ಪಾತ್ರಕ್ಕಾಗಿ ಮಾಡಿಕೊಂಡಿದ್ದ ಲುಕ್ ಅಷ್ಟೇ. ಇನ್ನೊಂದು ನೋವಿನ ಸಂಗತಿಯೆಂದರೆ, ಎರಡು ತಿಂಗಳ ಹಿಂದೆ ನನ್ನ ಆಪ್ತ ಸ್ನೇಹಿತ ನಿಧನರಾಗಿದ್ದರು. ಇಂತಹ ಸೂಕ್ಷ್ಮತೆಗಳೂ ಟ್ರೋಲಿಗರಿಗೆ ಅರ್ಥವಾಗುವುದಿಲ್ಲ" ಎಂದರು. ನಕಾರಾತ್ಮಕ ಕಾಮೆಂಟ್‌ಗಳಿಂದ ಅನೇಕರು ತೀವ್ರ ಖಿನ್ನತೆಗೆ ಒಳಗಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಟ್ರೋಲಿಗರನ್ನು ‘ಪರಾವಲಂಬಿಗಳು’ ಎಂದು ಜರೆದರು.
ಇದೇ ವೇಳೆ ಮಹಿಳಾ ಸೆಲೆಬ್ರಿಟಿಗಳನ್ನು ಅಸಭ್ಯವಾಗಿ ಚಿತ್ರೀಕರಿಸುವ ಪಾಪರಾಜಿಗಳ ಧೋರಣೆಯನ್ನು ಸಲ್ಮಾನ್ ಖಂಡಿಸಿದರು. "ನಟಿಯರ ಕಾಲುಗಳು ಹಾಗೂ ಹಿಂಭಾಗದ ಆಂಗಲ್ ಸಿಗಲಿ ಎಂದು ಕೆಲ ಫೋಟೋಗ್ರಾಫರ್‌ಗಳು ಕಾಯುತ್ತಿರುತ್ತಾರೆ. ಸಾಯಿ ಮಂಜ್ರೇಕರ್, ನೇಹಾ ಧೂಪಿಯಾ ಸೇರಿದಂತೆ ಹಲವರು ಇಂತಹ ನಡವಳಿಕೆಯಿಂದ ತೀವ್ರ ಮುಜುಗರಕ್ಕೊಳಗಾಗಿದ್ದನ್ನು ನಾನೇ ಕಣ್ಣಾರೆ ಕಂಡಿದ್ದೇನೆ" ಎಂದ ನಟ, ಇಂತಹ ಅಸಭ್ಯ ವರ್ತನೆಯ ವಿರುದ್ಧ ಮಹಿಳೆಯರು ನೇರವಾಗಿ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.
PublicNext
20/09/2026 02:30 pm