ಧಾರವಾಡ: ಭೀಕರ ಬರದಿಂದ ಉತ್ತರ ಕರ್ನಾಟಕ ತತ್ತರಗೊಂಡಿದ್ದು, ರೈತರಿಗೆ ತ್ವರಿತ ಗತಿಯಲ್ಲಿ ಬೆಳೆ ಪರಿಹಾರ ನೀಡುವಂತೆ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ಧಾರವಾಡದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ಬಗ್ಗೆ ಅಧಿವೇಶನ ಕರೆದಿದ್ದರೂ ಒಂದು ದಿನವಾದರೂ ಬರ ಸ್ಥಿತಿ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಕೋರುತ್ತೇನೆ. ಬರ ಪರಿಹಾರ ನೀಡುವಲ್ಲಿ ಕೇಂದ್ರದ ಮಾನದಂಡಗಳು ತೊಡಕಾಗಿವೆ. ಸತತ ೨೧ ದಿನಗಳ ಕಾಲ ಮಳೆಯಾಗದ ಪ್ರದೇಶವನ್ನು ಮಾತ್ರ ಬರಪೀಡಿತ ಎಂದು ಘೋಷಿಸಬೇಕೆಂಬ ಮಾನದಂಡದಿಂದ ಸಮಸ್ಯೆ ಉದ್ಭವಿಸಿದೆ. ಕೇಂದ್ರ ಸರಕಾರ ಘೋಷಣೆ ಮಾಡದೇ ನಮಗೆ ಬರ ಘೋಷಣೆ ಸಾಧ್ಯವಿಲ್ಲ. ಕೇಂದ್ರ ಸರಕಾರದ ಬರ ಅಧ್ಯಯನ ತಂಡ ತ್ವರಿತವಾಗಿ ಇಲ್ಲಿಗೆ ಬಂದು ವರದಿ ನೀಡಬೇಕು. ರಾಜ್ಯಕ್ಕೆ ಭೀಕರ ಬರಗಾಲ ಬಂದಿದ್ದು ಕೇಂದ್ರ ಸರಕಾರ ಕೂಡಲೇ ಪರಿಹಾರ ಒದಗಿಸಬೇಕು. ಅಲ್ಲದೇ ಫಸಲ್‌ಬಿಮಾ ಯೋಜನೆಯಿಂದ ಅರ್ಹ ರೈತರಿಗೆ ಬೆಳೆ ವಿಮೆ ನೀಡಬೇಕೆಂದರು.
ಮುಂದಿನ ಹಂತದಲ್ಲಿ ರಾಜ್ಯ ಸರಕಾರ ಜಿಲ್ಲೆಯ ಇತರ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸುವ ವಿಶ್ವಾಸವಿದೆ. ಈ ಬಗ್ಗೆ ಸಿಎಂ ಅವರಿಗೆ ಮನವಿ ಮಾಡಿ ಇಲ್ಲಿನ ಸ್ಥಿತಿಗತಿ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಪ್ರತಿ ಪಕ್ಷದ ನಾಯಕ ಆರ್. ಅಶೋಕ ಅವರು ಬರ ಸ್ಥಿತಿ ಕುರಿತು ರಸ್ತೆಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ಅವರು ಅಧಿವೇಶನದಲ್ಲಿ ಚರ್ಚೆ ಮಾಡಿದರೆ ಒಳಿತು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ನುಡಿದರು.
ಯಾವುದೇ ಸರಕಾರವಿದ್ದರೂ ಒಂದೇ ಹಂತದಲ್ಲಿ ಎಲ್ಲ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿಲ್ಲ. ಹಂತ ಹಂತವಾಗಿ ಮಾಡಬೇಕಾಗುತ್ತದೆ. ಈಗ ಎರಡು ಹಂತಗಳಲ್ಲಿ ಬರಪೀಡಿತ ತಾಲೂಕುಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮುಂದಿನ ಹಂತದಲ್ಲಿ ಜಿಲ್ಲೆಯ ಉಳಿದ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡುವ ವಿಶ್ವಾಸವಿದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/09/2026 03:27 pm
LOADING...