ಧಾರವಾಡ: ಸರ್ಕಾರಿ ಕಟ್ಟಡ ಹಾಗೂ ಖಾಸಗಿ ಕಟ್ಟಡ ಎಂಬ ಭೇದ ಮಾಡದೆ ಸಿವಿಲ್ ಎಂಜಿನಿಯರ್‌ಗಳು ವೃತ್ತಿಗೆ ಗೌರವ ತರುವಂತೆ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಶಾಸಕ ಎನ್.ಎಚ್. ಕೋನರೆಡ್ಡಿ ಹೇಳಿದರು.
ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಬಾಳೇಕುಂದ್ರಿ ಸಭಾಂಗಣದಲ್ಲಿ ಶನಿವಾರ ಇಂಡಿಯನ್ ಕಾಂಕ್ರೀಟ್ ಇನ್‌ಸ್ಟಿಟ್ಯೂಟ್ ಹುಬ್ಬಳ್ಳಿ-ಧಾರವಾಡ ಸೆಂಟರ್, ಫೋರಮ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಧಾರವಾಡ ಸಹಯೋಗದಲ್ಲಿ ಎಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಲ್ಲ ಕಟ್ಟಡಗಳನ್ನು ಉತ್ತಮ ರೀತಿಯಲ್ಲಿಯೇ ನಿರ್ಮಾಣ ಮಾಡಬೇಕು. ಸರ್ಕಾರಿ ಕಚೇರಿಗಳು, ಹಾಸ್ಟೆಲ್‌ಗಳು, ಗೋದಾಮುಗಳನ್ನು ದೀರ್ಘ ಬಾಳಿಕೆ ಬರುವ ರೀತಿಯಲ್ಲಿ ನಿರ್ಮಿಸಬೇಕು. ಕಳಪೆ ಗುಣಮಟ್ಟದ ಕಟ್ಟಡಗಳು ಬಿದ್ದು ಜೀವಹಾನಿಯಾದರೆ ಅದರಿಂದ ಎಂಜಿನಿಯರ್‌ಗಳ ಬಗೆಗಿನ ವಿಶ್ವಾಸ ಕಡಿಮೆಯಾಗುತ್ತದೆ. ಆದ್ದರಿಂದ ವೃತ್ತಿಗೆ ಗೌರವ ತರುವಂಥ, ಆತ್ಮತೃಪ್ತಿಯಾಗುವ ರೀತಿಯಲ್ಲಿ ಕಾರ್ಯ ಮಾಡಬೇಕು ಎಂದು ನುಡಿದರು.
ನಾನು ಅಕ್ರಮ-ಸಕ್ರಮಕ್ಕೆ ವಿರೋಧಿ. ಅಕ್ರಮ ಬಡಾವಣೆಗಳಲ್ಲಿ ಮನೆ ನಿರ್ಮಿಸಿದರೆ ಉದ್ಭವಿಸುವ ಸಮಸ್ಯೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ನಿಯಮ ಉಲ್ಲಂಘನೆ ಮಾಡದೆ ಕಟ್ಟಡ ನಿರ್ಮಿಸಬೇಕು ಎಂದು ತಿಳಿಸಿದರು. ಆಧುನಿಕ ಕಟ್ಟಡಗಳಿಗಾಗಿ ವಿಶೇಷ ಕಾಂಕ್ರೀಟ್ ಕುರಿತು ಪ್ರೊ. ಎಸ್.ಬಿ. ಹೆಗಡೆ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಹಿರಿಯ ಎಂಜಿನಿಯರ್ ಪ್ರಕಾಶ ಕುಸುಗಲ್ ಅವರನ್ನು ಸತ್ಕರಿಸಲಾಯಿತು. ಸುರೇಶ ಕಿರೇಸೂರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಡಾ. ಆನಂದ ಹುಣಶ್ಯಾಳ, ಎ.ಸಿ. ತಹಶೀಲ್ದಾರ, ಮಲ್ಲಿಕಾರ್ಜುನ ಇದ್ದರು. ಮಹೇಶ ನಿರೂಪಿಸಿದರು.
Kshetra Samachara
20/09/2026 04:21 pm
LOADING...