ನುಡಿ ನಮನ: ಕೇಶವ ನಾಡಕರ್ಣಿ
ಧಾರವಾಡ : ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಇನ್ನಿಲ್ಲ ಎಂಬ ಸುದ್ದಿ ಬರಸಿಡಿಲಿನಂತೆ ಬಂದು ಅಪ್ಪಳಿಸಿದೆ. ಡಾ. ಆನಂದ ಪಾಂಡುರಂಗಿ ನಮ್ಮನ್ನು ಅಗಲಿದ್ದಾರೆ ಎಂಬುದನ್ನು, ವಿಶೇಷವಾಗಿ ಈ ಭಾಗದ ಜನತೆಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
‘ಕಾಯಕವೇ ಕೈಲಾಸ, ಅದರಲ್ಲೇ ಭಗವಂತನನ್ನು ಕಾಣುತ್ತೇನೆ. ಒಂದು ಕ್ಷಣವನ್ನೂ ವ್ಯರ್ಥ ಮಾಡದೇ ಅದನ್ನು ರೋಗಿಗಳ ಸೇವೆಯಲ್ಲಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಸಂತಸ ಕಾಣುತ್ತೇನೆ’ ಎಂದು ಹೇಳುತ್ತಿದ್ದ ಈ ವೈದ್ಯ ಸಂತ ಇನ್ನಿಲ್ಲ ಎಂಬುದಕ್ಕೆ ಮನಸ್ಸು ಒಪ್ಪುತ್ತಿಲ್ಲ.
ಸದಾ ನಗುಮುಖ. ರೋಗಿಗಳಿರಲಿ, ಸ್ನೇಹಿತರಿರಲಿ ಅಥವಾ ಮಕ್ಕಳಿರಲಿ, ಎಲ್ಲರೊಂದಿಗೂ ನಯವಾಗಿ ಸಣ್ಣ ಧ್ವನಿಯಲ್ಲಿ ಮಾತನಾಡುವ ಸ್ವಭಾವ. ಅವರ ಬಳಿ ಮಾತನಾಡುವಾಗಲೇ ರೋಗಿ ಅರ್ಧದಷ್ಟು ಗುಣಮುಖನಾಗಿ ಬಿಡುತ್ತಾನೆ ಎನ್ನುವುದು ಜನಜನಿತ.
ಕೆಲವು ವೈದ್ಯರಂತೆ ಕಾಟಾಚಾರಕ್ಕೆ ಎಂದೂ ರೋಗಿಯನ್ನು ನೋಡುತ್ತಿರಲಿಲ್ಲ. ‘ಮನೋವೈದ್ಯಕೀಯದಲ್ಲಿ ಟ್ರೀಟ್‌ಮೆಂಟ್‌ಗಿಂತ ರೋಗಿಯ ಮನಃಸ್ಥಿತಿ, ಕುಟುಂಬದ ಸಾಮಾಜಿಕ ಪರಿಸ್ಥಿತಿ ಸ್ಟಡಿ ಮಾಡೋದು ಅತಿ ಮುಖ್ಯ. ಅವರು ಯಾವ ಪರಿಸ್ಥಿತಿಯಲ್ಲಿ ಒತ್ತಡಕ್ಕೆ ಸಿಕ್ಕಿಕೊಂಡಿದ್ದಾರೆ ಅನ್ನೋದನ್ನು ತಿಳಿದುಕೊಂಡು, ಕೌನ್ಸೆಲಿಂಗ್ ಮಾಡುವುದರ ಜೊತೆಗೆ ಚಿಕಿತ್ಸೆ ನೀಡಬೇಕಾಗುತ್ತೆ’ ಎಂದು ಯಾವಾಗಲೂ ಹೇಳುತ್ತಿದ್ದರು ಡಾ. ಆನಂದ ಪಾಂಡುರಂಗಿ.
ಪಬ್ಲಿಕ್ ನೆಕ್ಸ್ಟ್ ಸುದ್ದಿ ಮಾಧ್ಯಮಕ್ಕಾಗಿ ಅನೇಕ ಬಾರಿ ಸಂದರ್ಶನ ನೀಡಿದ್ದರು. ಶಿಕ್ಷಣ, ರಾಜಕೀಯ, ವಿಜ್ಞಾನ, ತಂತ್ರಜ್ಞಾನ, ಇಂದಿನ ವೈದ್ಯ ವೃತ್ತಿಯಲ್ಲಿ ಆಗಿರುವ ಬದಲಾವಣೆ ಹೀಗೆ ವಿಷಯ ಪ್ರಸ್ತಾಪಿಸಿದರೂ ನಿರರ್ಗಳವಾಗಿ ಮಾತನಾಡುವ ಪಾಂಡಿತ್ಯ ಅವರಲ್ಲಿತ್ತು. ವೈವಾಹಿಕ ಜೀವನದಲ್ಲಿ ಯುವಕರು, ಯುವತಿಯರು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಅನೇಕ ಲೇಖನಗಳನ್ನು ಅವರು ಬರೆದಿದ್ದರು.
ಯಾವುದೇ ಸಮಯಕ್ಕೆ ಹೋದರೂ ರೋಗಿಗಳು ಕಿಕ್ಕಿರಿದು ಸೇರಿದ್ದನ್ನು ಕಾಣಬಹುದಿತ್ತು. ಸಂದರ್ಶನಕ್ಕಾಗಿ ಹೆಚ್ಚು ಸಮಯ ತೆಗೆದುಕೊಂಡಾಗ ಮಾಧ್ಯಮದವರಿಗೇ ಮುಜುಗರವಾಗುತ್ತಿತ್ತು. ‘ಇನ್ನು ಸಾಕು ಡಾಕ್ಟ್ರೆ, ಹೊರಗೆ ಪೇಶೆಂಟ್ ನಿಮಗಾಗಿ ಕಾಯ್ತಾ ಇದ್ದಾರೆ. ನಾವು ಹೊರಡ್ತೀವಿ’ ಎಂದು ಹೇಳಿದಾಗ ನಗುಮೊಗದಿಂದ ಅವರು ಏನು ಹೇಳುತ್ತಿದ್ದರು ಗೊತ್ತೆ? ‘ಏನೂ ತೊಂದರೆ ಇಲ್ಲ, ಈ ರೀತಿ ಕಾಯಿಸೋ ಮೂಲಕ ನಾವು ರೋಗಿಗಳ ಪೇಶನ್ಸ್ ಟೆಸ್ಟ್ ಮಾಡ್ತೀವಿ. ಅವರು ಎಷ್ಟು ಹೊತ್ತು ಶಾಂತವಾಗಿ ವೇಟ್ ಮಾಡ್ತಾರೋ ಅಷ್ಟು ಬೇಗ ಗುಣಮುಖರಾಗುತ್ತಾರೆ’ ಎಂದು ಹೇಳುತ್ತಿದ್ದರು.
ಡಾ. ಆನಂದ ಪಾಂಡುರಂಗಿ ಅವರು ತಮ್ಮ ವೈದ್ಯ ವೃತ್ತಿಯನ್ನು ಎಷ್ಟು ಪ್ರೀತಿಸುತ್ತಿದ್ದರು ಎಂದರೆ, ತಮಗೆ ಅಪಘಾತವಾಗಿದ್ದರೂ ಕಾಲಿಗೆ, ಕೈಗೆ ಪ್ಲಾಸ್ಟರ್ ಹಾಕಿಕೊಂಡು ತಮ್ಮ ರೋಗಿಗಳನ್ನು ನೋಡಿ ಚಿಕಿತ್ಸೆ ನೀಡಿದ್ದ ಉದಾಹರಣೆ ಇದೆ.
25 ವರ್ಷಗಳ ಹಿಂದೆ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದಾಗ ಕಾರೊಂದು ಅವರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಹೋಗಿತ್ತು. ಆಗ ಅವರ ಕೈ, ಕಾಲಿನ ಮೂಳೆಗಳೂ ತುಂಡು ತುಂಡಾಗಿದ್ದವು. ಭುಜ ಮತ್ತು ಕಾಲಿನಲ್ಲಿ ರಾಡ್ ಹಾಕಲಾಗಿತ್ತು. ಬೆಡ್ ಮೇಲೆ ಮಲಗಿಕೊಂಡೇ ತಮ್ಮ ರೋಗಿಗಳನ್ನು ನೋಡುತ್ತಿದ್ದರಂತೆ. ‘ಮಲಗಿಕೊಂಡು ನೀವು ಹೇಗೆ ರೋಗಿಗಳನ್ನು ನೋಡುತ್ತಿದ್ದೀರಿ?’ ಎಂದು ಕೇಳಿದರೆ, ‘ರೋಗಿಗಳ ಕಣ್ಣು, ಮುಖದ ಭಾವ ನೋಡಿಯೇ ರೋಗಿಗೆ ಏನಾಗಿದೆ ತಿಳಿದು ನಾನು ಚಿಕಿತ್ಸೆ ನೀಡಬಲ್ಲೆ’ ಎನ್ನುತ್ತಿದ್ದರು ಡಾ. ಆನಂದ ಪಾಂಡುರಂಗಿ.
ರಾಜ್ಯದ ಮೂಲೆ ಮೂಲೆಗೂ ಸುತ್ತುತ್ತಿದ್ದ ಇವರು, ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದರು. ಶಾಲಾ-ಕಾಲೇಜುಗಳಿಗೆ ಹೋಗಿ ಅತಿಯಾದ ಮೊಬೈಲ್ ಬಳಕೆ, ಡ್ರಗ್ಸ್ ಹಾವಳಿಯಿಂದ ಮಕ್ಕಳ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ಮನಮುಟ್ಟುವಂತೆ ಮಾತನಾಡುತ್ತಿದ್ದರು. ಇದೇ ಕಾರಣಕ್ಕಾಗಿ ಬಹುತೇಕ ಆಡಳಿತ ಮಂಡಳಿಗಳು ಉಪನ್ಯಾಸಕ್ಕಾಗಿ ಇವರನ್ನು ಆಹ್ವಾನಿಸುತ್ತಿದ್ದವು. ಮಕ್ಕಳೊಂದಿಗೆ ಪಾಲಕರಿಗೂ ಅವರು ನೀಡುತ್ತಿದ್ದ ಸಲಹೆ-ಸೂಚನೆಗಳು ಮನಸ್ಸಿಗೆ ನಾಟುವಂತಿರುತ್ತಿದ್ದವು.
ಇವರ ಮನೆ ಒಂದು ಅನ್ನಛತ್ರದಂತೆ. ಸ್ನೇಹಿತರು, ಆತ್ಮೀಯರು ಯಾರೇ ಬಂದರೂ ಇವರ ಮನೆಯಲ್ಲಿಯೇ ಆತಿಥ್ಯ. ವೈದ್ಯೆ ಪತ್ನಿ ಅನುಪಮಾ ಅವರು ಅನ್ನಪೂರ್ಣೆ. ಯಾರೇ ಬಂದರೂ ಪ್ರೀತಿಯಿಂದ ತಿಂಡಿ-ಊಟದ ಆತಿಥ್ಯ ನೀಡುವರು. ಪುತ್ರ ಆದಿತ್ಯ, ಸೊಸೆ ಸಪ್ನಾ ಸಹ ಮನೋವೈದ್ಯಕೀಯ ವೃತ್ತಿಯನ್ನು ಮುಂದುವರಿಸಿದ್ದಾರೆ.
ವೀಕೆಂಡ್ ಹಾಗೂ ಸಂಡೆ ಎಲ್ಲರಿಗೂ ರಜೆ. ಆದರೆ ಡಾ. ಪಾಂಡುರಂಗಿ ಅವರಿಗೆ ಇದು ಅನ್ವಯಿಸುತ್ತಿರಲಿಲ್ಲ. ರಜೆಯಲ್ಲಿಯೂ ರೋಗಿಗಳನ್ನು ನೋಡುವುದು ಇವರ ಜಾಯಮಾನ.
‘ನಾನು ಭಾನುವಾರ ಊರಲ್ಲಿದ್ದರೆ ಕ್ಲಿನಿಕ್‌ಗೆ ರಜೆ ಎಂಬುದೇ ಇಲ್ಲ. ಎಷ್ಟೇ ರೋಗಿಗಳು ಬಂದರೂ ಬೇಸರವಿಲ್ಲದೇ ಖುಷಿಖುಷಿಯಾಗಿ ಚಿಕಿತ್ಸೆ ಕೊಡುತ್ತೇನೆ. ಆ ಮೂಲಕ ಅದರಲ್ಲೇ ನನ್ನ ಸಂತಸ ಕಾಣುತ್ತೇನೆ. ಇನ್ನು ಉಳಿದಂತೆ ಪೂರ್ವನಿಗದಿತ ಕಾರ್ಯಕ್ರಮಗಳಿದ್ದಲ್ಲಿ ಕುಟುಂಬ ಸದಸ್ಯರೊಡನೆ ಸೇರಿಕೊಂಡು ಕಾಡಿನತ್ತ ಹೆಜ್ಜೆ ಹಾಕುತ್ತೇನೆ. ನಿಸರ್ಗ ಎಂದರೆ ನನಗೆ ಬಲು ಇಷ್ಟ. ಪ್ರಶಾಂತ ವಾತಾವರಣದಲ್ಲಿ ಕೆರೆ ದಂಡೆಯೋ ದೊಡ್ಡದಾದ ಗಿಡದ ಕೆಳಗೆ ಕುಳಿತು ನಿಸರ್ಗಾನುಸಂಧಾನ ನಡೆಸುತ್ತೇನೆ. ಕ್ರಿಯಾಶೀಲ ವ್ಯಕ್ತಿಯ ಮನಸ್ಸು ಯಾವಾಗಲೂ ಹೊಸತನಕ್ಕೆ ತುಡಿಯುತ್ತಿರುತ್ತದೆ’ ಎನ್ನುತ್ತಿದ್ದರು ಡಾ. ಆನಂದ ಪಾಂಡುರಂಗಿ.
ಇವರ ಆಸ್ಪತ್ರೆಯ ಹೆಸರು ಶಾಂತಿಧಾಮ. ಹೆಸರಿಗೆ ತಕ್ಕಂತೆ ಅದು ಶಾಂತಿಧಾಮವೇ. ‘ಮನಸ್ಸಿಗೆ ಶಾಂತಿ ಮುಖ್ಯ. ಅದಕ್ಕಾಗಿಯೇ ಆ ಹೆಸರನ್ನು ಇಟ್ಟಿದ್ದೇವೆ’ ಎಂದು ಸದಾ ಹೇಳುತ್ತಿದ್ದರು ಶ್ರೀಮತಿ ಅನುಪಮಾ ಪಾಂಡುರಂಗಿ. ರೋಗಿಗಳು ಒಳಗೆ ಪ್ರವೇಶಿಸುತ್ತಲೇ ಮನಸ್ಸಿಗೆ ಒಂದು ಶಾಂತಿ ದೊರೆಯುತ್ತದೆ ಎಂಬುದು ಸುಳ್ಳಲ್ಲ. ಡಾ. ಪಾಂಡುರಂಗಿ ಅವರ ಅಗಲಿಕೆಯಿಂದ ಶಾಂತಿಧಾಮದ ‘ಆನಂದ’ ಇಂದು ಇಲ್ಲದಂತಾಯಿತು.
ಇಂತಹ ಪವಿತ್ರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸೋಣ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/09/2026 03:32 pm