ಬಳ್ಳಾರಿ : ಐತಿಹಾಸಿಕ ಬಳ್ಳಾರಿ ಬೆಟ್ಟ ವೀಕ್ಷಣೆಗೆ ತೆರಳಿದ್ದ ಕುಟುಂಬವೊಂದಕ್ಕೆ ವಿಧಿ ಕ್ರೂರವಾಗಿ ಕಾಡಿದೆ. ಬೆಟ್ಟದ ಮೇಲಿನ ಹೊಂಡದಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ನೀರಿಗೆ ಇಳಿದ ತಂದೆಯೂ ಸಾವನ್ನಪ್ಪಿದ್ದು, ತಂದೆ-ಮಗ ಇಬ್ಬರೂ ದುರಂತ ಅಂತ್ಯ ಕಂಡಿದ್ದಾರೆ.
ಆಯುಧ ಪೂಜೆ ಹಬ್ಬದ ರಜೆ ಹಿನ್ನೆಲೆಯಲ್ಲಿ ಮೂರು ಕುಟುಂಬಗಳು ಒಟ್ಟಾಗಿ ಬಳ್ಳಾರಿ ಬೆಟ್ಟ ವೀಕ್ಷಣೆಗೆ ತೆರಳಿದ್ದವು. ಈ ವೇಳೆ ಬೆಟ್ಟದ ಹಿಂಭಾಗದಲ್ಲಿರುವ ಹೊಂಡದಲ್ಲಿ ಮೀನುಗಳನ್ನು ನೋಡಲು ತೆರಳಿದ್ದ 10 ವರ್ಷದ ಬಾಲಕ ಹೊನ್ನೂರಸ್ವಾಮಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ ಎನ್ನಲಾಗಿದೆ.
ಕಣ್ಣೆದುರೇ ಮಗ ನೀರಿನಲ್ಲಿ ಮುಳುಗುವುದನ್ನು ಕಂಡ ತಂದೆ ರಮೇಶ್, ಆತನನ್ನು ಉಳಿಸುವ ಆತುರದಲ್ಲಿ ಹೊಂಡಕ್ಕೆ ಇಳಿದಿದ್ದಾರೆ. ಆದರೆ ದುರದೃಷ್ಟವಶಾತ್ ತಂದೆ-ಮಗ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತರು ಮೂಲತಃ ಆಂಧ್ರಪ್ರದೇಶದ ಕಣೇಕಲ್ ಪ್ರದೇಶದವರಾಗಿದ್ದು, ಬಟ್ಟೆ ಒಗೆಯುವ ವೃತ್ತಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕೌಲ್ ಬಜಾರ್ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ಹೊಂಡದಿಂದ ಹೊರತೆಗೆದಿದ್ದಾರೆ. ಈ ಸಂಬಂಧ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಬ್ಬದ ಸಂಭ್ರಮದಲ್ಲಿರಬೇಕಿದ್ದ ಕುಟುಂಬದಲ್ಲಿ ಈಗ ಸೂತಕದ ಛಾಯೆ ಆವರಿಸಿದ್ದು, ತಂದೆ-ಮಗನ ಸಾವು ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ.
ವರದಿ: ಹೊನ್ನುರಸ್ವಾಮಿ ಕೆ.ಟಿ. ಪಬ್ಲಿಕ್ ನೆಕ್ಸ್ಟ್, ಬಳ್ಳಾರಿ.
PublicNext
21/10/2026 01:33 pm
LOADING...