ಪ್ಯಾರಿಸ್: ಸಾಮಾನ್ಯವಾಗಿ ದನ–ಕರು, ಕುರಿ–ಮೇಕೆಗಳಂತಹ ರಾಸುಗಳಲ್ಲಿ ಮಾತ್ರ ಕಂಡುಬರುತ್ತಿದ್ದ ಅಪರೂಪದ ‘ಶಮೋಂಡಾ ವೈರಸ್’ (Shamonda virus) ಸೋಂಕು ಇತಿಹಾಸದಲ್ಲೇ ಮೊದಲ ಬಾರಿಗೆ ಮಾನವನ ದೇಹದಲ್ಲಿ ಪತ್ತೆಯಾಗಿದೆ. ಫ್ರಾನ್ಸ್‌ನ ಲಿಯಾನ್ (Lyon) ನಗರದಲ್ಲಿ ವ್ಯಕ್ತಿಯೊಬ್ಬರು ಅಕ್ಟೋಬರ್ ತಿಂಗಳ ಆರಂಭದಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿ ಸಾವನ್ನಪ್ಪಿದ್ದರು.
ಇನ್ನು ಈ ಸಾವಿನ ನಿಖರ ಕಾರಣ ತಿಳಿಯಲು ರಕ್ತ ಮತ್ತು ಅಂಗಾಂಶಗಳ ಪರೀಕ್ಷೆ ನಡೆಸಿದಾಗ, ಅವರಿಗೆ ಶಮೋಂಡಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಜಗತ್ತಿನಲ್ಲೇ ಮನುಷ್ಯನೊಬ್ಬನಿಗೆ ಈ ವೈರಸ್ ತಗುಲಿ ಮೃತಪಟ್ಟಿರುವ ಮೊದಲ ಪ್ರಕರಣ ಇದಾಗಿದೆ.
ವೈರಸ್ ಮನುಷ್ಯನಿಗೆ ಅಂಟಿದ್ದು ಹೇಗೆ?
ಪ್ರಕರಣದ ಕುರಿತು ಸ್ಪಷ್ಟನೆ ನೀಡಿರುವ ಫ್ರಾನ್ಸ್‌ನ ಸಾರ್ವಜನಿಕ ಆರೋಗ್ಯ ಇಲಾಖೆ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ
ಸಾಮಾನ್ಯವಾಗಿ ಶಮೋಂಡಾ ವೈರಾಣು ಮಾನವನ ಪ್ರತಿರಕ್ಷಣಾ ವ್ಯವಸ್ಥೆಯನ್ನು ಭೇದಿಸಿ ಸೋಂಕು ಹರಡುವಷ್ಟು ಬಲಶಾಲಿಯಲ್ಲ. ಆದರೆ ಮೃತ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ (Immunity) ತೀರಾ ಕುಸಿದಿದ್ದ ಕಾರಣ ವೈರಾಣು ಸುಲಭವಾಗಿ ದೇಹ ಪ್ರವೇಶಿಸಿ ಜೀವಹಾನಿಗೆ ಕಾರಣವಾಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಇದು ವ್ಯಕ್ತಿಯಿಂದ ವ್ಯಕ್ತಿಗೆ ನೇರವಾಗಿ ಹರಡುವ (Human-to-human transmission) ಸಾಂಕ್ರಾಮಿಕ ರೋಗವಲ್ಲದ ಕಾರಣ ಸಾರ್ವಜನಿಕ ಆರೋಗ್ಯಕ್ಕೆ ಸದ್ಯಕ್ಕೆ ಯಾವುದೇ ಗಂಭೀರ ಬೆದರಿಕೆ ಇಲ್ಲ ಎಂದು ಇಲಾಖೆ ಹೇಳಿದೆ.
ಏನಿದು ಶಮೋಂಡಾ ವೈರಸ್?
ಮೂಲ: 1960ರ ದಶಕದ ಮಧ್ಯಭಾಗದಲ್ಲಿ ಆಫ್ರಿಕಾದ ನೈಜೀರಿಯಾದಲ್ಲಿ ಈ ವೈರಾಣು ಮೊದಲ ಬಾರಿಗೆ ಪತ್ತೆಯಾಗಿತ್ತು. ಪಶ್ಚಿಮ, ಪೂರ್ವ ಮತ್ತು ದಕ್ಷಿಣ ಆಫ್ರಿಕಾ ಹಾಗೂ ಜಪಾನ್ ಭಾಗದ ಜಾನುವಾರುಗಳಲ್ಲಿ ಆಗಾಗ್ಗೆ ಈ ಸೋಂಕು ಕಾಣಿಸಿಕೊಳ್ಳುತ್ತದೆ.
PublicNext
23/10/2026 06:16 pm