ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫಿಟ್‌ನೆಸ್‌ಗೆ ಸವಾಲು ಹಾಕಿದ 42 ಕಿ.ಮೀ ಓಟವೇ ಟೆಕ್ಕಿಯ ಪಾಲಿಗೆ ಕೊನೆಯ ಓಟವಾಯ್ತಾ?

ಹೈದರಾಬಾದ್: ಮ್ಯಾರಥಾನ್ ಓಟ ಪೂರ್ಣಗೊಳಿಸಿ ಗೆಲುವಿನ ಮೆಡಲ್ ಪಡೆದುಕೊಂಡ ಸಂಭ್ರಮದಲ್ಲಿದ್ದ 36 ವರ್ಷದ ಟೆಕ್ಕಿ ಕೆಲವೇ ನಿಮಿಷಗಳಲ್ಲಿ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಬರೋಬ್ಬರಿ 42.2 ಕಿಲೋಮೀಟರ್ ದೂರದ ಮ್ಯಾರಥಾನ್ ಪೂರ್ಣಗೊಳಿಸಿದ್ದ ಐಬಿಎಂ ಸಾಫ್ಟ್‌ವೇರ್ ಎಂಜಿನಿಯರ್ ಕೊಮ್ಮಿನೇನಿ ಗೋಪಿ ಅವರ ಸಾವು ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ದೀರ್ಘಕಾಲದ ಓಟ ಹೃದಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಆರೋಗ್ಯವಾಗಿರುವ ವ್ಯಕ್ತಿಗೂ ದಿಢೀರ್ ಹೃದಯಾಘಾತ ಸಂಭವಿಸಬಹುದೇ ಎಂಬ ಚರ್ಚೆ ಆರಂಭವಾಗಿದೆ.

42 ಕಿ.ಮೀ ಓಟ ಮುಗಿಸಿ ಮೆಡಲ್ ಪಡೆದಿದ್ದ ಟೆಕ್ಕಿ

ನವೆಂಬರ್ 1ರ ಭಾನುವಾರ ಹೈದರಾಬಾದ್‌ನ ಗಚಿಬೌಲಿ ಸ್ಟೇಡಿಯಂನಲ್ಲಿ NEB ಸ್ಪೋರ್ಟ್ಸ್ ಆಯೋಜಿಸಿದ್ದ 8ನೇ ಆವೃತ್ತಿಯ ಹೈಟೆಕ್ ಫುಲ್ ಮ್ಯಾರಥಾನ್‌ನಲ್ಲಿ ಕೊಮ್ಮಿನೇನಿ ಗೋಪಿ ಭಾಗವಹಿಸಿದ್ದರು. 36 ವರ್ಷದ ಗೋಪಿ ಅವರು ಅಲ್ಕಾಪುರ ಕಾಲೋನಿಯ ನಿವಾಸಿಯಾಗಿದ್ದು, ಮಣಿಕೊಂಡ ಪ್ರದೇಶದಲ್ಲಿ ವಾಸಿಸುತ್ತಿದ್ದರು.

42.2 ಕಿಲೋಮೀಟರ್‌ಗಳ ಕಠಿಣ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅವರು ಫಿನಿಶರ್ ಮೆಡಲ್ ಕೂಡ ಪಡೆದುಕೊಂಡಿದ್ದರು. ಬಳಿಕ ಉಪಾಹಾರ ಸೇವಿಸುವ ಸ್ಥಳದತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಕಾರ್ಯಕ್ರಮದ ಆಯೋಜಕರು ಸ್ಥಳಕ್ಕೆ ಧಾವಿಸಿ ಸಿಪಿಆರ್ (CPR) ಚಿಕಿತ್ಸೆ ನೀಡಿದ್ದಾರೆ. ನಂತರ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬೆಳಗ್ಗೆ ಸುಮಾರು 8.45ರ ವೇಳೆಗೆ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಪ್ರಾಥಮಿಕ ಪೊಲೀಸ್ ಮಾಹಿತಿಯ ಪ್ರಕಾರ ಹೃದಯಾಘಾತವಾಗಿರುವ ಶಂಕೆ ವ್ಯಕ್ತವಾಗಿದೆ. ಆದರೆ ಸಾವಿಗೆ ನಿಖರ ಕಾರಣವೇನು ಎಂಬುದು ವೈದ್ಯಕೀಯ ಪರೀಕ್ಷೆಯ ಬಳಿಕವಷ್ಟೇ ಸ್ಪಷ್ಟವಾಗಬೇಕಿದೆ.

42 ಕಿ.ಮೀ ಓಟದಿಂದ ಹೃದಯಾಘಾತ ಸಂಭವಿಸುತ್ತಾ?

ನಿಯಮಿತವಾಗಿ ಓಡುವುದು ಮತ್ತು ವ್ಯಾಯಾಮ ಮಾಡುವುದು ಹೃದಯದ ಆರೋಗ್ಯಕ್ಕೆ ಉತ್ತಮ. ಆದರೆ ಯಾವುದೇ ಪೂರ್ವಸಿದ್ಧತೆ ಇಲ್ಲದೆ ಅಥವಾ ದೇಹದ ಸಾಮರ್ಥ್ಯಕ್ಕಿಂತ ಹೆಚ್ಚು ದೈಹಿಕ ಶ್ರಮ ವಹಿಸುವುದು ಅಪಾಯಕಾರಿಯಾಗಬಹುದು.

ಮ್ಯಾರಥಾನ್‌ನಂತಹ ದೀರ್ಘದೂರದ ಓಟದ ಸಂದರ್ಭದಲ್ಲಿ ಹೃದಯವು ಸ್ನಾಯುಗಳಿಗೆ ನಿರಂತರವಾಗಿ ಆಮ್ಲಜನಕಯುಕ್ತ ರಕ್ತವನ್ನು ಪೂರೈಸಬೇಕಾಗುತ್ತದೆ. ಇದರಿಂದ ಹೃದಯದ ಮೇಲೆ ಹೆಚ್ಚಿನ ಒತ್ತಡ ಬೀಳಬಹುದು. ಈಗಾಗಲೇ ಹೃದಯ ಸಂಬಂಧಿ ಸಮಸ್ಯೆ ಹೊಂದಿರುವ ಅಥವಾ ಪತ್ತೆಯಾಗದ ಹೃದಯದ ಕಾಯಿಲೆ ಇರುವವರಲ್ಲಿ ತೀವ್ರ ದೈಹಿಕ ಶ್ರಮವು ಹೃದಯ ಸಂಬಂಧಿ ತುರ್ತು ಪರಿಸ್ಥಿತಿಗೆ ಕಾರಣವಾಗುವ ಸಾಧ್ಯತೆ ಇದೆ.

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ, ಮ್ಯಾರಥಾನ್ ಮತ್ತು ಟ್ರಯಥ್ಲಾನ್‌ನಂತಹ ತೀವ್ರ ಸಹಿಷ್ಣುತೆಯ ಕ್ರೀಡೆಗಳಲ್ಲಿ ಕೆಲವು ವ್ಯಕ್ತಿಗಳಿಗೆ ಹೃದಯಾಘಾತ, ಹಠಾತ್ ಹೃದಯ ಸ್ತಂಭನ ಹಾಗೂ ಹೃದಯ ಬಡಿತದ ಅಸಹಜತೆಗಳ ಅಪಾಯ ಹೆಚ್ಚಾಗಬಹುದು. ಅದರಲ್ಲೂ ಸರಿಯಾದ ತರಬೇತಿ ಇಲ್ಲದವರು ಅಥವಾ ಪತ್ತೆಯಾಗದ ಹೃದಯದ ಸಮಸ್ಯೆ ಹೊಂದಿರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು.

ಆದರೆ ಇಂತಹ ಘಟನೆಗಳು ಅಪರೂಪ. ಬಹುತೇಕ ಜನರಿಗೆ ನಿಯಮಿತ ದೈಹಿಕ ಚಟುವಟಿಕೆ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಇನ್ನು ದೀರ್ಘಕಾಲದ ಓಟದ ಸಂದರ್ಭದಲ್ಲಿ ದೇಹದಲ್ಲಿ ನೀರಿನ ಕೊರತೆ ಉಂಟಾಗುವುದು ಅಥವಾ ಎಲೆಕ್ಟ್ರೋಲೈಟ್‌ಗಳ ಸಮತೋಲನ ತಪ್ಪುವುದು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅತಿಯಾಗಿ ನೀರು ಕುಡಿಯುವುದೂ ಕೆಲವು ಸಂದರ್ಭಗಳಲ್ಲಿ ಸಮಸ್ಯೆ ಉಂಟುಮಾಡಬಹುದು.

Edited By :
PublicNext

PublicNext

04/11/2026 08:19 pm

Cinque Terre

5.58 K

Cinque Terre

0

ಸಂಬಂಧಿತ ಸುದ್ದಿ