ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗರಣಿ ಕ್ರಾಸ್‌ನಿಂದ ಗೋಪನಹಳ್ಳಿಗೆ ತೆರಳುವ 3 ಕಿಲೋಮೀಟರ್ ರಸ್ತೆ ಸಂಪೂರ್ಣ ಅಧ್ವಾನಗೊಂಡಿದೆ. ರಸ್ತೆಯಲ್ಲಿ ಮೊಣಕಾಲುದ್ದದ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಜೀವಭಯದಲ್ಲೇ ಸಂಚರಿಸುತ್ತಿದ್ದಾರೆ. ಈ ಮಾರ್ಗವು ಚಿಕ್ಕೇನಹಳ್ಳಿ, ಯಲಗಟ್ಟೆ, ಟಿ.ಎನ್.ಕೋಟೆ ಸೇರಿ 10ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ನಿತ್ಯ ನೂರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಆಟೋ-ಬಸ್‌ಗಳು ಇದೇ ದುರ್ಗಮ ಹಾದಿಯಲ್ಲಿ ಸಂಚರಿಸುತ್ತಿದ್ದು, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ.
ಇನ್ನೊಂದೆಡೆ, ನಿರಂತರವಾಗಿ ಮರಳು ತುಂಬಿದ ಲಾರಿಗಳು ಓಡಾಡುತ್ತಿರುವುದೇ ರಸ್ತೆ ಹಾಳಾಗಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗುಂಡಿ ತಪ್ಪಿಸಲು ಹೋಗಿ ಹಲವು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಕೆಲ ತಿಂಗಳ ಹಿಂದೆ PWD ಇಲಾಖೆ ಮಾಡಿದ ಪ್ಯಾಚ್‌ವರ್ಕ್ ಕಾಮಗಾರಿ ಕಳಪೆಯಾಗಿದ್ದರಿಂದ ಕೆಲವೇ ದಿನಗಳಲ್ಲಿ ರಸ್ತೆ ಮತ್ತೆ ಕಿತ್ತುಹೋಗಿದೆ. ಈ ಕುರಿತು ಶಾಸಕ, ಸಚಿವ ಟಿ. ರಘುಮೂರ್ತಿ ಹಾಗೂ PWD ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಜನಪ್ರತಿನಿಧಿಗಳು ಹಾಗೂ PWD ಇಲಾಖೆಯ ನಿರ್ಲಕ್ಷ್ಯಕ್ಕೆ ಗೋಪನಹಳ್ಳಿ ರಸ್ತೆ ಬಲಿಯಾಗಿದ್ದು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ರಸ್ತೆಗೆ ಸೂಕ್ತ ಕಾಯಕಲ್ಪ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
PublicNext
24/10/2026 07:43 pm
LOADING...