ಚಿಕ್ಕಬಳ್ಳಾಪುರ : ಮದುವೆಯಾಗಿ ಕೆಲವೇ ತಿಂಗಳುಗಳಾಗಿದ್ದ ನವದಂಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದುರ್ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ–ಬೆಂಗಳೂರು ರಸ್ತೆಯಲ್ಲಿ ನಡೆದಿದೆ. ಇಕೋ ಕಾರು ಮತ್ತು ಎಲೆಕ್ಟ್ರಿಕ್ ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಚಿಂತಾಮಣಿ ನಗರದ ಎಂ.ಜಿ. ರಸ್ತೆಯ ಶ್ರೀನಿವಾಸ್ ಜ್ಯುವೆಲ್ಸ್ ಸಮೀಪದ ನಿವಾಸಿಗಳಾದ ಷನ್ಮುಖ (27) ಮತ್ತು ಅವರ ಪತ್ನಿ ಮಿಥುಲ (24) ಎಂದು ಗುರುತಿಸಲಾಗಿದೆ.
ದಂಪತಿ ಎಲೆಕ್ಟ್ರಿಕ್ ಬೈಕ್ನಲ್ಲಿ ಚಿಂತಾಮಣಿ–ಬೆಂಗಳೂರು ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಎದುರಿನಿಂದ ಬಂದ ಇಕೋ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರು ಮತ್ತು ಬೈಕ್ ಜಖಂಗೊಂಡಿವೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಷನ್ಮುಖ ಮತ್ತು ಮಿಥುಲ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಇದೇ ಅಪಘಾತದಲ್ಲಿ ಇಕೋ ಕಾರಿನಲ್ಲಿದ್ದ ಸೂರಜ್, ಎಂ.ಎಲ್. ಕುಮಾರ್ ಮತ್ತು ಅತುಲಾ ಅವರಿಗೂ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಮಾಹಿತಿ ತಿಳಿದು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶಿವರಾಜ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆಯಾಗಿ ಕೆಲವೇ ತಿಂಗಳುಗಳಾಗಿದ್ದ ನವದಂಪತಿ ಅಪಘಾತದಲ್ಲಿ ಮೃತಪಟ್ಟಿರುವುದರಿಂದ ಎರಡೂ ಕುಟುಂಬಗಳಲ್ಲಿ ಶೋಕ ಆವರಿಸಿದೆ.
PublicNext
26/10/2026 01:15 pm