ಚಿಂತಾಮಣಿ : ಬೆಂಗಳೂರು ರಸ್ತೆಯಲ್ಲಿ ಇಕೋ ಕಾರು ಹಾಗೂ ಎಲೆಕ್ಟ್ರಿಕ್ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನವದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಅಪಘಾತದಲ್ಲಿ ಚಿಂತಾಮಣಿ ನಗರದ ಎಂ.ಜಿ. ರಸ್ತೆಯ ಶ್ರೀನಿವಾಸ್ ಜ್ಯುವೆಲ್ಸ್ ಸಮೀಪದ ನಿವಾಸಿಗಳಾದ ಷನ್ಮುಖ (27) ಹಾಗೂ ಅವರ ಪತ್ನಿ ಮಿಥುಲ್ (24) ಮೃತಪಟ್ಟಿದ್ದಾರೆ. ಈ ದಂಪತಿಗೆ ಕೆಲವೇ ತಿಂಗಳ ಹಿಂದಷ್ಟೇ ವಿವಾಹವಾಗಿತ್ತು ಎನ್ನಲಾಗಿದ್ದು, ದುರಂತದಿಂದ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಶೋಕ ಆವರಿಸಿದೆ.
ಚಿಂತಾಮಣಿ–ಬೆಂಗಳೂರು ರಸ್ತೆಯಲ್ಲಿ ಎಲೆಕ್ಟ್ರಿಕ್ ಬೈಕ್‌ನಲ್ಲಿ ದಂಪತಿ ಸಂಚರಿಸುತ್ತಿದ್ದ ವೇಳೆ ಇಕೋ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಹಾಗೂ ಕಾರು ಜಖಂಗೊಂಡಿದ್ದು, ಬೈಕ್‌ನಲ್ಲಿದ್ದ ದಂಪತಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತದಲ್ಲಿ ಕಾರಿನಲ್ಲಿದ್ದ ಸೂರಜ್, ಎಂ.ಎಲ್. ಕುಮಾರ್ ಹಾಗೂ ಅತುಲಾ ಎಂಬುವವರಿಗೂ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶಿವರಾಜ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡು ತನಿಖೆ ಮುಂದುವರಿಸಿದ್ದಾರೆ.
PublicNext
26/10/2026 02:25 pm
LOADING...