ಶಿಡ್ಲಘಟ್ಟ : ಪತ್ನಿಗೆ ಬಟ್ಟೆ ಕೊಡಿಸುವುದಾಗಿ ಹೇಳಿ ನಗರಕ್ಕೆ ಕರೆದೊಯ್ದ ಪತಿಯೇ ಮಾರ್ಗಮಧ್ಯೆ ತಮ್ಮದೇ ಗೋಡಂಬಿ ತೋಟಕ್ಕೆ ಕರೆದೊಯ್ದು ಆಕೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಕಸಬಾ ಹೋಬಳಿಯ ತಾತಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹತ್ಯೆಯಾದ ಮಹಿಳೆಯನ್ನು ಪದ್ಮಾ (30) ಎಂದು ಗುರುತಿಸಲಾಗಿದ್ದು, ಕೊಲೆ ಆರೋಪಿಯಾಗಿರುವ ಪತಿ ಚಂದ್ರು, ಘಟನೆ ಬಳಿಕ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಮುಂದೆ ಶರಣಾಗಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೊ ತಿಳಿಸಿದ್ದಾರೆ.
ಪದ್ಮಾಳನ್ನು ಗೌರಿಬಿದನೂರು ತಾಲೂಕಿನ ನಕ್ಕಲಹಳ್ಳಿ ಗ್ರಾಮಕ್ಕೆ ವಿವಾಹ ಮಾಡಿಕೊಡಲಾಗಿತ್ತು. ಕಳೆದ ಎರಡು ದಿನಗಳಿಂದ ತಾತಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದ ದಂಪತಿಯ ನಡುವೆ ಕಳೆದ ಎರಡು ವರ್ಷಗಳಿಂದ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಪತ್ನಿಗೆ ಬಟ್ಟೆ ಕೊಡಿಸುವ ನೆಪದಲ್ಲಿ ಚಂದ್ರು ಆಕೆಯನ್ನು ನಗರಕ್ಕೆ ಕರೆದೊಯ್ಯುವ ಮಾರ್ಗಮಧ್ಯೆ ತಾತಹಳ್ಳಿ ಗ್ರಾಮದ ಸಮೀಪದಲ್ಲಿರುವ ತಮ್ಮದೇ ಗೋಡಂಬಿ ತೋಟಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ಬಳಿಕ ಆರೋಪಿ ಚಂದ್ರು ನೇರವಾಗಿ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ವಿಷಯ ತಿಳಿದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೊ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೈಟ್ : ಪದ್ಮಿನಿ ಸಾಹೊ, ಜಿಲ್ಲಾ ಪೊಲೀಸತ ವರಿಷ್ಠಾಧಿಕಾರಿ
ಪತ್ನಿಯ ಹತ್ಯೆಗೆ ದಂಪತಿಯ ನಡುವೆ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದ ಕೌಟುಂಬಿಕ ಕಲಹವೇ ಕಾರಣವಾಗಿರಬಹುದು ಎಂದು ಮೃತಳ ತಾಯಿ ನರಸಮ್ಮ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ದಂಪತಿಗೆ ಮೂವರು ಮಕ್ಕಳಿದ್ದು, ತಾಯಿಯನ್ನು ಕಳೆದುಕೊಂಡ ಮಕ್ಕಳ ಪರಿಸ್ಥಿತಿ ಮನಕಲಕುವಂತಿದೆ. ಘಟನೆಯಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಆಘಾತ ಮತ್ತು ಶೋಕದ ವಾತಾವರಣ ನಿರ್ಮಾಣವಾಗಿದೆ.
PublicNext
05/11/2026 01:07 pm