ಭಾಗ್ಯನಗರ: ಎಂಎಲ್‌ಸಿ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ನಾಲ್ಕು ಸ್ಥಾನಗಳಲ್ಲಿ ಜಯಗಳಿಸಿರುವುದು ಕಾಂಗ್ರೆಸ್ ಸರ್ಕಾರದ ಆಡಳಿತದ ವಿರುದ್ಧ ಪದವೀಧರರು ಮತ್ತು ಶಿಕ್ಷಕರು ನೀಡಿರುವ ಸ್ಪಷ್ಟ ಸಂದೇಶವಾಗಿದೆ ಎಂದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಂಡಲಾಧ್ಯಕ್ಷ ಆರ್. ಪ್ರತಾಪ್ ಹೇಳಿದರು.
ಪಟ್ಟಣದ ಎಚ್.ಎನ್. ವೃತ್ತದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಭಾಗವಹಿಸಿ ಹಾಗೂ ಮೆರವಣಿಗೆ ನಡೆಸಿ ಮಾತನಾಡಿದ ಅವರು, ಆಗ್ನೇಯ ಪದವೀಧರ ಕ್ಷೇತ್ರ ಸೇರಿದಂತೆ ರಾಜ್ಯದ ವಿಧಾನಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ನಾಲ್ಕು ಸ್ಥಾನಗಳಲ್ಲಿ ಜಯಭೇರಿ ಬಾರಿಸಿರುವುದು ಮುಂದಿನ ಚುನಾವಣೆಗಳಿಗೆ ದಿಕ್ಸೂಚಿಯಾಗಿದೆ ಎಂದರು.
ಚುನಾವಣೆಗೂ ಮುನ್ನ ಹಲವು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಇದೀಗ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ರಾಜ್ಯದ ಖಜಾನೆ ಖಾಲಿಯಾಗಿದ್ದು, ಜನಪರ ಕಲ್ಯಾಣ ಕಾರ್ಯಕ್ರಮಗಳಿಗೆ ಹಣದ ಕೊರತೆ ಎದುರಾಗಿದೆ ಎಂಬುದು ಜನರಿಗೆ ಮನವರಿಕೆಯಾಗಿದೆ. ಕಾಂಗ್ರೆಸ್ ಸರ್ಕಾರದ ನೀತಿ-ಧೋರಣೆಗಳ ಬಗ್ಗೆ ಜನರು ಅಸಮಾಧಾನಗೊಂಡಿದ್ದು, ಅದರ ಪ್ರತಿಫಲ ಚುನಾವಣೆಯಲ್ಲಿ ವ್ಯಕ್ತವಾಗಿದೆ ಎಂದು ಟೀಕಿಸಿದರು.
ಎನ್‌ಡಿಎ ಮೈತ್ರಿಕೂಟದ ಈ ಗೆಲುವು ಮುಂಬರುವ ಚುನಾವಣೆಗಳಲ್ಲಿಯೂ ಬಿಜೆಪಿ ಮತ್ತು ಮೈತ್ರಿಕೂಟಕ್ಕೆ ಹೆಚ್ಚಿನ ಬಲ ನೀಡಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳು, ದೂರದೃಷ್ಟಿಯ ಆಡಳಿತ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಗೌರವ ತಂದುಕೊಟ್ಟಿರುವುದು ಜನರ ವಿಶ್ವಾಸಕ್ಕೆ ಕಾರಣವಾಗಿದೆ ಎಂದು ಪ್ರತಾಪ್ ತಿಳಿಸಿದರು.
ವಿಜಯೋತ್ಸವದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ದ್ವಿಚಕ್ರ ವಾಹನಗಳಲ್ಲಿ ಕೇಸರಿ ಧ್ವಜಗಳನ್ನು ಹಿಡಿದು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಡಿ.ವಿ.ಜಿ. ವೃತ್ತ, ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಜಯಘೋಷ ಮೊಳಗಿಸಿದರು. ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಮೈಸೂರು ಪಾಕ್ ವಿತರಿಸುವ ಮೂಲಕ ಗೆಲುವಿನ ಸಂಭ್ರಮ ಆಚರಿಸಿದರು.
ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ
PublicNext
28/10/2026 08:26 pm