ಮೈಸೂರು : ನಾಡಹಬ್ಬ ಮೈಸೂರು ದಸರಾ ಕಾರ್ಯಕ್ರಮದ ಅವ್ಯವಸ್ಥೆ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸರ್ಕಾರಕ್ಕೆ ನಾಲ್ಕು ಪುಟಗಳ ಸುದೀರ್ಘ ಪತ್ರ ಬರೆದಿರುವ ಅವರು, ವಿವಿಧ ಇಲಾಖೆಗಳ ಅಧಿಕಾರಿಗಳ ನಡೆ ಹಾಗೂ ಸಮನ್ವಯದ ಕೊರತೆಯನ್ನು ಖಂಡಿಸಿದ್ದಾರೆ.
ಪತ್ರದಲ್ಲಿ ಪ್ರಮುಖವಾಗಿ ಪೊಲೀಸ್ ಇಲಾಖೆಯ ಕಾರ್ಯವೈಖರಿ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿವಿಧ ಸರ್ಕಾರಿ ಇಲಾಖೆಗಳ ನಡುವೆ ಸಮನ್ವಯದ ಕೊರತೆ ನಿರಾಸೆ ಮೂಡಿಸಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ವಜ್ರಮುಷ್ಠಿ ಕಾಳಗದ ಸಂದರ್ಭದಲ್ಲೂ ಪೊಲೀಸರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚಿನ್ನದ ಅಂಬಾರಿಯ ಭದ್ರತೆ ವಿಚಾರವಾಗಿ ಪೊಲೀಸ್ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಪ್ರಮೋದಾದೇವಿ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಆಯುಕ್ತರು ನೀಡಿದ ಭರವಸೆಯ ಮೇರೆಗೆ ಅಂಬಾರಿಯನ್ನು ನೀಡಲಾಗಿತ್ತು. ಆದರೆ, ಆಯುಕ್ತರು ತಮ್ಮ ಭರವಸೆಯನ್ನು ಉಳಿಸಿಕೊಂಡಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಂಬಾರಿಯ ಸುತ್ತ ಅನಧಿಕೃತ ವ್ಯಕ್ತಿಗಳು ಓಡಾಡುತ್ತಿದ್ದರು. ಅಂಬಾರಿ ನಮ್ಮ ಖಾಸಗಿ ಆಸ್ತಿಯೇ ಹೊರತು ಸರ್ಕಾರದ ಆಸ್ತಿಯಲ್ಲ. ಅಂಬಾರಿ ಬಳಿ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಇದ್ದರು. ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಅಂಬಾರಿಯ ಸುತ್ತ ಸುಳಿದಾಡುತ್ತಿದ್ದರು. ಇಂತಹ ಬೆಳವಣಿಗೆಗಳಿಂದ ಅಂಬಾರಿಯ ಭದ್ರತೆಗೆ ಧಕ್ಕೆ ಉಂಟಾಗಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.
ಇದಲ್ಲದೆ, ರಾಜಮನೆತನದವರಿಗೆ ಮೀಸಲಿರಿಸಿದ್ದ ಸ್ಥಳವನ್ನು ಪೊಲೀಸರು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಂಬಾರಿ ಆನೆ ವಿಚಾರದಲ್ಲಿ ಗೌಪ್ಯತೆ ಆರೋಪ
ಅಂಬಾರಿ ಹೊರುವ ಆನೆಯ ಆಯ್ಕೆ ವಿಚಾರವನ್ನು ಕೊನೆಯ ಕ್ಷಣದವರೆಗೂ ಮುಚ್ಚಿಡಲಾಗಿತ್ತು ಎಂದು ಪ್ರಮೋದಾದೇವಿ ಒಡೆಯರ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ 45 ವರ್ಷಗಳಲ್ಲಿ ಮೊದಲ ಬಾರಿಗೆ ಅಂಬಾರಿ ಆನೆಯ ವಿಚಾರದಲ್ಲಿ ಇಂತಹ ಗೌಪ್ಯತೆ ವಹಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಕೇವಲ ಐದು ದಿನಗಳು ಬಾಕಿ ಇರುವಾಗ ಮಾಹಿತಿ ನೀಡಲಾಗಿತ್ತು. ಯಾವ ಆನೆಗೆ ಅಂಬಾರಿ ಹೊರಿಸಲಾಗುತ್ತದೆ ಎಂಬುದನ್ನು ತಾವೇ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ಖುದ್ದು ಡಿಸಿಎಫ್ ಅವರನ್ನು ವಿಚಾರಿಸಬೇಕಾಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರತಿ ವರ್ಷವೂ ದಸರಾ ಕಾರ್ಯಕ್ರಮಕ್ಕೆ ತಾವು ಸಹಕಾರ ನೀಡುತ್ತಾ ಬಂದಿದ್ದರೂ, ಅದನ್ನು ಸಾಮಾನ್ಯ ಸಂಗತಿಯೆಂದು ಪರಿಗಣಿಸಿ ನಿರ್ಲಕ್ಷ್ಯ ತೋರಲಾಗುತ್ತಿದೆ. ಇದು ತೀವ್ರ ನಿರಾಸೆ ಮೂಡಿಸಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಸರ್ಕಾರ ತಮ್ಮ ಸಲಹೆಗಳನ್ನು ಪರಿಗಣಿಸಿ, ಅವುಗಳಿಗೆ ಸೂಕ್ತ ಮೌಲ್ಯ ನೀಡಬೇಕು ಎಂದು ಪ್ರಮೋದಾದೇವಿ ಒಡೆಯರ್ ಒತ್ತಾಯಿಸಿದ್ದಾರೆ.
PublicNext
26/10/2026 01:30 pm