ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಅಂಬಾರಿ ನಮ್ಮ ಖಾಸಗಿ ಸ್ವತ್ತು, ಹಿಂದೆಯೂ ನಮ್ಮದೇ ಮುಂದೆಯೂ ನಮ್ಮದೇ - ಪ್ರಮೋದಾದೇವಿ ಒಡೆಯರ್

ಮೈಸೂರು: ಮೈಸೂರು ಅರಮನೆ, ಅಂಬಾರಿ ಹಾಗೂ ದಸರಾ ಧಾರ್ಮಿಕ ಆಚರಣೆಗಳ ವಿಚಾರವಾಗಿ ಉಂಟಾಗಿರುವ ಗೊಂದಲಗಳಿಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂಬಾರಿಯನ್ನು ಬಾಡಿಗೆ ರೂಪದಲ್ಲಿ ನೀಡುವುದಿಲ್ಲ. ಗೌರವಧನದ ರೂಪದಲ್ಲಿ ಹಣ ನೀಡಲಾಗುತ್ತದೆ. ಅಂಬಾರಿ ಬೇಕೆಂದು ಸರ್ಕಾರದ ವತಿಯಿಂದ ಮೊದಲು ಪತ್ರ ಬರೆಯಲಾಗುತ್ತದೆ. ಬಳಿಕ ಅಂಬಾರಿ ನೀಡುವ ಪ್ರಕ್ರಿಯೆ ನಡೆಯುತ್ತದೆ. ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಅಂಬಾರಿಯನ್ನು ಯಾವ ಆನೆಯ ಮೇಲೆ ಕೊಂಡೊಯ್ಯಲಾಗುತ್ತದೆ ಎಂಬುದನ್ನು ಕೇಳುವುದು ಸಹಜ. ಏಕೆಂದರೆ ಮಾವುತರು ಹಾಗೂ ಲಕ್ಷಾಂತರ ಜನರ ಸುರಕ್ಷತೆಯ ದೃಷ್ಟಿಯಿಂದ ಅಂಬಾರಿಗೆ ವಿಮೆ ಮಾಡಿಸಲಾಗುತ್ತದೆ ಎಂದು ತಿಳಿಸಿದರು.

ಅಂಬಾರಿ ಮತ್ತು ಸಿಂಹಾಸನ ನಮ್ಮ ಖಾಸಗಿ ಸ್ವತ್ತುಗಳಾಗಿದ್ದು, ಅರಮನೆ ಸ್ವಾಧೀನ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ. ಅಂಬಾರಿ ಯಾವತ್ತೂ ಅರಮನೆಯಿಂದ ಹೊರಗೆ ಹೋಗಿಲ್ಲ. ಹಿಂದೆಯೂ ನಮ್ಮದೇ, ಮುಂದೆಯೂ ನಮ್ಮದೇ ಎಂದು ಸ್ಪಷ್ಟಪಡಿಸಿದರು.

ಯದುವಂಶದ ಆಚರಣೆಗಳನ್ನು ಸರ್ಕಾರ ಮುಂದುವರಿಸಿಕೊಂಡು ಬಂದಿಲ್ಲ. ಸರ್ಕಾರ ಕೇವಲ ಸಾಂಸ್ಕೃತಿಕ ಆಚರಣೆಗಳನ್ನು ನಡೆಸುತ್ತಿದೆ. ಯದುವಂಶದ ಧಾರ್ಮಿಕ ಆಚರಣೆಗಳನ್ನು ನಾವು ನಮ್ಮ ಸಂಪ್ರದಾಯದಂತೆ ಮುಂದುವರಿಸಿಕೊಂಡು ಬರುತ್ತಿದ್ದೇವೆ. 1998ರಲ್ಲಿ ಒಂದು ಕೋಟಿ ರೂಪಾಯಿ ಹಾಗೂ ಒಂದು ಎಕರೆ ಜಾಗ ನೀಡುತ್ತೇವೆ, ಆರು ತಿಂಗಳಲ್ಲಿ ಅರಮನೆ ಖಾಲಿ ಮಾಡಬೇಕೆಂದು ಹೇಳಲಾಗಿತ್ತು. ಆದರೆ ತಮ್ಮ ಪತಿ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅದಕ್ಕೆ ಒಪ್ಪಿರಲಿಲ್ಲ. ಇಂದಿನ ಬೆಲೆಗಳಲ್ಲಿ ಒಂದು ಕೋಟಿ ರೂಪಾಯಿ ಅರಮನೆಯ ಒಂದು ಕಂಬಕ್ಕೂ ಸಾಲುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಅರಮನೆಯಲ್ಲಿ ಸರ್ಕಾರದ ಸ್ವಾಧೀನದಲ್ಲಿರುವ ಜಾಗದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಲು ನಮಗೆ ಅವಕಾಶವಿದೆ. ನಾವು ವಾಸಿಸುವ ಪ್ರದೇಶದ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯ ಸೂಚಿಸಿದೆ. ಈ ಸಂಬಂಧದ ಪ್ರಕರಣ ನ್ಯಾಯಾಲಯದಲ್ಲಿದ್ದು, ಸದ್ಯ ಯಥಾಸ್ಥಿತಿ ಆದೇಶ ಜಾರಿಯಲ್ಲಿದೆ. ನ್ಯಾಯಾಲಯದ ಅಂತಿಮ ತೀರ್ಪು ಬಂದರೆ ಎಲ್ಲ ಗೊಂದಲಗಳಿಗೂ ತೆರೆ ಬೀಳಲಿದೆ ಎಂದರು.

ಪ್ರತಿವರ್ಷ ಆಯುಧಪೂಜೆ ಸಂದರ್ಭದಲ್ಲಿ ನಡೆಮುಡಿ ಆಚರಣೆಗೆ ಬ್ಯಾರಿಕೇಡ್‌ಗಳಿಂದ ತೊಂದರೆಯಾಗುತ್ತಿದೆ. ನಡೆಮುಡಿ ಮೇಲೆ ಯಾರೂ ಓಡಾಡದಂತೆ ನೋಡಿಕೊಳ್ಳಲು ವ್ಯವಸ್ಥೆ ಮಾಡಿದ್ದರೂ ಸಮಸ್ಯೆ ಎದುರಾಗುತ್ತಿದೆ. ಜಟ್ಟಿಕಾಳಗ ನಮ್ಮ ಧಾರ್ಮಿಕ ಆಚರಣೆಯ ಒಂದು ಭಾಗವಾಗಿದೆ. ಈ ಬಾರಿ ಕೆಲವು ಪೊಲೀಸ್ ಸಿಬ್ಬಂದಿಯಿಂದ ತೊಂದರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಂಬಾರಿಯನ್ನು ಸರ್ಕಾರವೇ ಮಾಡಿಸಿಕೊಳ್ಳಲಿ, ನಮ್ಮ ಬಳಿ ಕೇಳುವ ಅಗತ್ಯವಿಲ್ಲ ಎಂದು ಹಿಂದೆಯೇ ತಿಳಿಸಿದ್ದೇನೆ. ಆದರೆ ಮೆರವಣಿಗೆಗೆ ಅಂಬಾರಿ ನೀಡುವುದಿಲ್ಲ ಎಂದು ನಾನು ಎಂದಿಗೂ ಹೇಳಿಲ್ಲ. ಮುಖ್ಯಮಂತ್ರಿ ಹಾಗೂ ಸಚಿವರೊಂದಿಗೆ ಚರ್ಚಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದರು.

ಇನ್ನು ಈ ವರ್ಷದ ಗೊಂದಲವನ್ನು ಮುಂದುವರಿಸಿಕೊಂಡು ಹೋಗಲು ಇಷ್ಟವಿಲ್ಲ. ಯಾರ ಬಗ್ಗೆಯೂ ದ್ವೇಷವಿಲ್ಲ, ರಾಜಿ ಮಾಡಿಕೊಳ್ಳುವ ಪ್ರಶ್ನೆಯೂ ಇಲ್ಲ. ಬಿಜೆಪಿ, ಜೆಡಿಎಸ್ ಅಥವಾ ಕಾಂಗ್ರೆಸ್ ಯಾವುದೇ ಸರ್ಕಾರವಿದ್ದರೂ ಆಯಾ ಕಾಲಘಟ್ಟದಲ್ಲಿ ಒಂದಷ್ಟು ಸಮಸ್ಯೆಗಳು ಎದುರಾಗಿವೆ. ನಮ್ಮ ಕಡೆಯಿಂದ ಸರ್ಕಾರಕ್ಕೆ ಯಾವುದೇ ತೊಂದರೆ ನೀಡುವುದಿಲ್ಲ. ಅದೇ ರೀತಿ ನಮ್ಮ ಧಾರ್ಮಿಕ ಆಚರಣೆಗಳಿಗೂ ಸರ್ಕಾರ ತೊಂದರೆ ನೀಡಬಾರದು ಎಂಬುದಷ್ಟೇ ನಮ್ಮ ಮನವಿಯಾಗಿದೆ ಎಂದು ಪ್ರಮೋದಾದೇವಿ ಒಡೆಯರ್ ಹೇಳಿದರು.

ಅರಮನೆ ವಿವಾದಕ್ಕೆ ಸಂಬಂಧಿಸಿದಂತೆ ಕೆಲವು ನ್ಯಾಯಾಲಯದ ತೀರ್ಪುಗಳು ಬಂದರೆ ಸಮಸ್ಯೆ ಬಗೆಹರಿಯಲಿದೆ. ಬೆಂಗಳೂರಿನಲ್ಲಿ 460 ಎಕರೆ ಜಮೀನಿಗೆ 11 ಕೋಟಿ ರೂಪಾಯಿ ಪರಿಹಾರ ನೀಡಲು ನಿರ್ಧರಿಸಿರುವ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಈ ಬಗ್ಗೆ ಸಾರ್ವಜನಿಕರೇ ನಿರ್ಧರಿಸಲಿ ಎಂದು ಹೇಳಿದರು.

ಅರಮನೆ, ಅಂಬಾರಿ ಹಾಗೂ ಯದುವಂಶದ ಧಾರ್ಮಿಕ ಆಚರಣೆಗಳ ಕುರಿತು ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆಯುವ ಉದ್ದೇಶದಿಂದಲೇ ಸುದ್ದಿಗೋಷ್ಠಿ ನಡೆಸಿರುವುದಾಗಿ ಪ್ರಮೋದಾದೇವಿ ಒಡೆಯರ್ ತಿಳಿಸಿದರು.

Edited By :
PublicNext

PublicNext

04/11/2026 08:34 pm

Cinque Terre

6.09 K

Cinque Terre

0

ಸಂಬಂಧಿತ ಸುದ್ದಿ