ವಾಷಿಂಗ್ಟನ್: ಕೃತಕ ಬುದ್ಧಿಮತ್ತೆ (AI) ಮೂಲಸೌಕರ್ಯಗಳ ಮೇಲೆ ಭಾರಿ ಬಂಡವಾಳ ಹೂಡಿಕೆ ಮಾಡುತ್ತಿರುವ ಟೆಕ್ ದೈತ್ಯ ಮೈಕ್ರೋಸಾಫ್ಟ್, ವೆಚ್ಚ ನಿಯಂತ್ರಣದ ಭಾಗವಾಗಿ ಭಾರತ, ಅಮೆರಿಕ, ಬ್ರಿಟನ್ ಹಾಗೂ ಕೆನಡಾದಲ್ಲಿನ ಅರ್ಹ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿರ್ಗಮನ ಯೋಜನೆ ಪ್ರಕಟಿಸಿದೆ.
ಈ ಯೋಜನೆಯು ಸಂಸ್ಥೆಯ ಜಾಗತಿಕ ಕಾರ್ಯಪಡೆಯ ಶೇ.25ಕ್ಕೂ ಹೆಚ್ಚು ಉದ್ಯೋಗಿಗಳನ್ನು, ಅಂದರೆ ಸುಮಾರು 60,000 ಸಿಬ್ಬಂದಿಯನ್ನು ಒಳಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿದಬಂದಿದೆ.
ಭಾರತ, ಅಮೆರಿಕ, ಬ್ರಿಟನ್ ಮತ್ತು ಕೆನಡಾದಲ್ಲಿ ಲೆವೆಲ್ 70 ಹಾಗೂ ಅದಕ್ಕಿಂತ ಕೆಳಗಿನ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಸಿಬ್ಬಂದಿಗೆ ಈ ಅವಕಾಶ ಲಭ್ಯವಿದೆ. ಎಐ ಎಕ್ಸ್‌ಪೀರಿಯನ್ಸಸ್, ಕೊಪೈಲಟ್, ಹಣಕಾಸು, ಮಾನವ ಸಂಪನ್ಮೂಲ, ಎಕ್ಸ್‌ಬಾಕ್ಸ್ ಹಾಗೂ ವಿಂಡೋಸ್ ಮತ್ತು ಡಿವೈಸಸ್ ವಿಭಾಗಗಳ ಉದ್ಯೋಗಿಗಳು ಅರ್ಜಿ ಸಲ್ಲಿಸಬಹುದು. ಆದರೆ ಮಾರ್ಕೆಟಿಂಗ್, ಕಮರ್ಷಿಯಲ್ ಬಿಸಿನೆಸ್ ಮತ್ತು ಸೆಕ್ಯುರಿಟಿ ತಂಡಗಳನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ.
ಸಂಸ್ಥೆಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಎಮಿ ಕೋಲ್‌ಮನ್ ಅವರು ಆಂತರಿಕ ಪತ್ರದ ಮೂಲಕ ಈ ಕ್ರಮವನ್ನು ವಿವರಿಸಿದ್ದಾರೆ. ಸಂಸ್ಥೆಯಿಂದ ಹೊರಬಂದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಬಯಸುವ ಅರ್ಹ ಉದ್ಯೋಗಿಗಳಿಗೆ ಸೂಕ್ತ ಬೆಂಬಲದೊಂದಿಗೆ ಗೌರವಯುತವಾಗಿ ನಿರ್ಗಮಿಸಲು ಇದು ಅವಕಾಶ ಕಲ್ಪಿಸಲಿದೆ. ಜತೆಗೆ, ಬದಲಾಗುತ್ತಿರುವ ತಂತ್ರಜ್ಞಾನದ ಅಗತ್ಯಗಳಿಗೆ ಅನುಗುಣವಾಗಿ ಮಾನವ ಸಂಪನ್ಮೂಲವನ್ನು ಮರುಹೊಂದಿಸಲು ನೆರವಾಗಲಿದೆ ಎಂದು ತಿಳಿಸಿದ್ದಾರೆ.
ಇದು ನಿಗದಿತ ಅವಧಿಗೆ ಸೀಮಿತವಾದ ಸ್ವಯಂಪ್ರೇರಿತ ಯೋಜನೆಯಾಗಿದ್ದು, ಹಿಂದಿನ ಸ್ವಯಂ ನಿವೃತ್ತಿ ಯೋಜನೆಯ ಯಶಸ್ಸಿನ ಆಧಾರದ ಮೇಲೆ ರೂಪಿಸಲಾಗಿದೆ. ಜೂನ್ 30ರ ವಾರ್ಷಿಕ ದಾಖಲೆಗಳ ಪ್ರಕಾರ, ಮೈಕ್ರೋಸಾಫ್ಟ್ ಜಾಗತಿಕವಾಗಿ 2,23,000 ಪೂರ್ಣಾವಧಿ ಉದ್ಯೋಗಿಗಳನ್ನು ಹೊಂದಿದೆ.
ಮೈಕ್ರೋಸಾಫ್ಟ್ 2026ರ ಕ್ಯಾಲೆಂಡರ್ ವರ್ಷದಲ್ಲಿ ಡೇಟಾ ಸೆಂಟರ್‌ಗಳು ಮತ್ತು ಎಐ ಚಿಪ್‌ಗಳ ಮೂಲಸೌಕರ್ಯಕ್ಕಾಗಿ ಬರೋಬ್ಬರಿ 175 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಮುಂದಾಗಿದೆ. ಈ ಬೃಹತ್ ಹೂಡಿಕೆಗೆ ಅನುಗುಣವಾಗಿ ಆದಾಯ ವೃದ್ಧಿಯಾಗುತ್ತಿದೆಯೇ ಎಂಬುದರ ಮೇಲೆ ಹೂಡಿಕೆದಾರರ ಗಮನ ನೆಟ್ಟಿದೆ.
ಈ ವರ್ಷದ ಆರಂಭದಲ್ಲಿ ಮೈಕ್ರೋಸಾಫ್ಟ್ ಅಮೆರಿಕದಲ್ಲಿನ ಸುಮಾರು ಶೇ.7ರಷ್ಟು, ಅಂದರೆ ಅಂದಾಜು 9,000 ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿರ್ಗಮನದ ಅವಕಾಶ ನೀಡಿತ್ತು. ಜುಲೈನಲ್ಲಿ ಎಕ್ಸ್‌ಬಾಕ್ಸ್ ಗೇಮಿಂಗ್ ವಿಭಾಗದ ಪುನರ್‌ರಚನೆಯ ಭಾಗವಾಗಿ 4,800 ಉದ್ಯೋಗಗಳನ್ನು ಕಡಿತಗೊಳಿಸಿತ್ತು ಎಂದು ವರದಿಯಾಗಿದೆ.
ತ್ರೈಮಾಸಿಕ ಆರ್ಥಿಕ ಫಲಿತಾಂಶ ಪ್ರಕಟವಾಗಲು ಕೆಲವೇ ದಿನಗಳು ಬಾಕಿ ಇರುವಾಗ ಈ ಬೆಳವಣಿಗೆ ನಡೆದಿದೆ.
PublicNext
28/10/2026 04:29 pm