ಹಾಸನ : ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ಇಂದು ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ತೆರೆಯಲಿದೆ. ಆಶ್ವೀಜ ಕೃಷ್ಣ ಪಕ್ಷದ ಚತುರ್ಥಿ ಹಾಗೂ ರೋಹಿಣಿ ನಕ್ಷತ್ರದ ಶುಭ ಮುಹೂರ್ತದಲ್ಲಿ ಗರ್ಭಗುಡಿಯ ಬಾಗಿಲನ್ನು ಓಪನ್ ಮಾಡಲಾಗುತ್ತಿದ್ದು, ಇಂದು (ಅಕ್ಟೋಬರ್ 29) ರಿಂದ ನವೆಂಬರ್ 11ರವರೆಗೆ ಒಟ್ಟು 14 ದಿನಗಳ ಕಾಲ ನಾಡಹಬ್ಬದ ಮಾದರಿಯಲ್ಲಿ ‘ಹಾಸನಾಂಬೆ ಜಾತ್ರಾ ಮಹೋತ್ಸವ’ ಜರುಗಲಿದೆ.
ಸಾರ್ವಜನಿಕ ಧರ್ಮದರ್ಶನದ ಜೊತೆಗೆ ಭಕ್ತಾದಿಗಳ ಅನುಕೂಲಕ್ಕಾಗಿ 300 ರೂ. ಹಾಗೂ 1,000 ರೂ.ನ ಪ್ರತ್ಯೇಕ ಕ್ಯೂ ಲೈನ್ ಟಿಕೆಟ್‌ಗಳನ್ನು ಕಲ್ಪಿಸಲಾಗಿದೆ.
ಗೋಲ್ಡನ್ ಪಾಸ್ : ಬೆಳಿಗ್ಗೆ 8:00 ರಿಂದ 10:00 ಗಂಟೆಯವರೆಗೆ ದರ್ಶನಕ್ಕೆ ಅವಕಾಶ (ಒಬ್ಬರಿಗೆ ಮಾತ್ರ ಅನುಮತಿ).
ವಿಐಪಿ ದರ್ಶನ : ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ ಗಣ್ಯರಿಗೆ ಜಿಲ್ಲಾಡಳಿತದಿಂದಲೇ ದರ್ಶನ ವ್ಯವಸ್ಥೆ.
ಜಾತ್ರೆಯ ಮೊದಲ ದಿನ (ಇಂದು) ಮತ್ತು ಕೊನೆಯ ದಿನ ಯಾವುದೇ ಶಿಷ್ಟಾಚಾರ ಹಾಗೂ ಪಾಸ್‌ಗಳಿಗೆ ಅವಕಾಶವಿರುವುದಿಲ್ಲ.
30 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, 2,000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಸಿಸಿಟಿವಿ ಹಾಗೂ ಡೆಡಿಕೇಟೆಡ್ ಡ್ರೋನ್ ಕ್ಯಾಮೆರಾಗಳ ಮೂಲಕ ಕಟ್ಟುನಿಟ್ಟಿನ ಕಣ್ಣಾವಲು ಇರಿಸಲಾಗಿದೆ. “ಹಿಂದೆ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದ ಹಾಸನಾಂಬೆ ಉತ್ಸವ ಇಂದು ‘ನಾಡ ಹಬ್ಬ’ವಾಗಿ ಬೃಹತ್ ಮಟ್ಟದಲ್ಲಿ ಬೆಳೆದಿದೆ. ಲಕ್ಷಾಂತರ ಭಕ್ತರು ಆಗಮಿಸುವಾಗ ‘ಸ್ಥಳೀಯರು’ ಎಂದು ಸಂಕುಚಿತವಾಗಿ ಯೋಚಿಸುವುದು ಬೇಡ. ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸೋಣ.” ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಹೇಳಿದ್ದಾರೆ.
ಭಕ್ತರ ಸುಲಭ ಸಂಚಾರಕ್ಕಾಗಿ ಕೇಂದ್ರ ಸರ್ಕಾರವು ಬೆಂಗಳೂರು – ಹಾಸನ ಹಾಗೂ ಅರಸೀಕೆರೆ – ಹಾಸನ ನಡುವೆ 2 ವಿಶೇಷ ರೈಲುಗಳ ಕಾರ್ಯಾಚರಣೆಗೆ ಗ್ರೀನ್ ಸಿಗ್ನಲ್ ನೀಡಿದೆ.
ಸಾರಿಗೆ ಇಲಾಖೆಯು ಮೈಸೂರು, ಬೆಂಗಳೂರು, ಮಡಿಕೇರಿ ಸೇರಿದಂತೆ ಪ್ರಮುಖ ಜಿಲ್ಲೆಗಳಿಂದ ಹಾಸನಕ್ಕೆ 200ಕ್ಕೂ ಅಧಿಕ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಯೋಜಿಸಿದೆ.
PublicNext
29/10/2026 07:49 am