ಹಾಸನ : ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಅಧಿದೇವತೆ ತಾಯಿ ಹಾಸನಾಂಬೆಯ ದರ್ಶನ ಪಡೆಯಲು ಭಕ್ತರು ಮುಗಿಬಿದ್ದಿದ್ದಾರೆ. ಜಾತ್ರಾ ಮಹೋತ್ಸವದ ಆರಂಭದ ದಿನವೇ ಸಾವಿರಾರು ಭಕ್ತರು ಆಗಮಿಸಿದ್ದು, ದೇವಸ್ಥಾನದ ಸುತ್ತಮುತ್ತ ಭಾರೀ ಜನಸಂದಣಿ ಕಂಡುಬಂದಿದೆ. ಮುಂಜಾನೆ 3 ಗಂಟೆಯಿಂದಲೇ ದರ್ಶನಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ.
ದೇವಸ್ಥಾನದಲ್ಲಿ 300 ರೂ. ವಿಶೇಷ ದರ್ಶನದ ಟಿಕೆಟ್ ಪಡೆದವರ ಸರತಿ ಸಾಲು ಸುಮಾರು ಎರಡು ಕಿಲೋಮೀಟರ್‌ವರೆಗೆ ವಿಸ್ತರಿಸಿದೆ. ಇನ್ನು 1,000 ರೂ. ವಿಶೇಷ ದರ್ಶನದ ಸಾಲು ಕೂಡ ಭಕ್ತರಿಂದ ಸಂಪೂರ್ಣ ಭರ್ತಿಯಾಗಿದೆ. ಬೆಳಿಗ್ಗೆ 8ರಿಂದ 10 ಗಂಟೆಯವರೆಗೆ ಗೋಲ್ಡ್ ಪಾಸ್ ಹೊಂದಿರುವವರಿಗೆ ಹಾಗೂ 10:30ರಿಂದ ಮಧ್ಯಾಹ್ನ 12:30ರವರೆಗೆ ಶಿಷ್ಟಾಚಾರದಡಿ ಬರುವ ಗಣ್ಯರಿಗೆ (VIP) ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ದೇವಸ್ಥಾನದಲ್ಲಿ ಮೊಕ್ಕಾಂ ಹೂಡಿದ್ದಾರೆ. ಧರ್ಮದರ್ಶನ ಸೇರಿದಂತೆ 300 ರೂ. ಮತ್ತು 1,000 ರೂ. ವಿಶೇಷ ದರ್ಶನದ ಸರತಿ ಸಾಲುಗಳನ್ನು ಪರಿಶೀಲಿಸಿದ್ದಾರೆ. ಭಕ್ತರ ನಡುವೆ ನೂಕುನುಗ್ಗಲು ಉಂಟಾಗದಂತೆ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಿದ್ದಾರೆ.
ಈ ವರ್ಷದ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಗುರುವಾರ (ಅ.29) ಸಂಪ್ರದಾಯಬದ್ಧವಾಗಿ ಚಾಲನೆ ನೀಡಲಾಗಿತ್ತು. ಆಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12:28ಕ್ಕೆ ಅರಸು ವಂಶಸ್ಥ ನಂಜರಾಜೆ ಅರಸ್ ಅವರು ಗೊನೆಯುಳ್ಳ ಬಾಳೆಕಂಬವನ್ನು ಕಡಿದ ಬಳಿಕ, ಹಲವು ಗಣ್ಯರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಿಯ ಗರ್ಭಗುಡಿಯ ಬಾಗಿಲು ತೆರೆಯಲಾಗಿತ್ತು. ಇದರೊಂದಿಗೆ ಭಕ್ತರಿಗೆ ದೇವಿಯ ದರ್ಶನ ಪಡೆಯುವ ಅವಕಾಶ ಆರಂಭವಾಗಿದೆ.
PublicNext
30/10/2026 08:55 am
LOADING...