ಸಕಲೇಶಪುರ: ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ಕೇಳುವ ಹಕ್ಕಿದೆ. ರಾಜ್ಯದ ಸ್ಥಳೀಯ ಯುವಜನರಿಗೆ ನ್ಯಾಯಯುತ ಉದ್ಯೋಗಾವಕಾಶ ಕಲ್ಪಿಸುವುದು ಸರ್ಕಾರ ಹಾಗೂ ಉದ್ಯಮ ವಲಯದ ಜವಾಬ್ದಾರಿಯಾಗಿದೆ ಎಂದು ಮಲೆನಾಡು ರಕ್ಷಣಾ ಸೇನೆಯ ಸಕಲೇಶಪುರ ತಾಲೂಕು ಅಧ್ಯಕ್ಷ ಮಂಜುದೇವ್ ಆಗ್ರಹಿಸಿದರು.
ಕನ್ನಡಿಗರ ಉದ್ಯೋಗಾವಕಾಶಗಳ ಕುರಿತು ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಕಷ್ಟಪಟ್ಟು ಶಿಕ್ಷಣ ಕೊಡಿಸುತ್ತಾರೆ. ಯುವಜನರು ಪದವಿ ಹಾಗೂ ಅಗತ್ಯ ಕೌಶಲ್ಯಗಳನ್ನು ಪಡೆದುಕೊಂಡಿದ್ದರೂ ಉದ್ಯೋಗದ ಸಂದರ್ಭದಲ್ಲಿ ಅವರಿಗೆ ಸಮಾನ ಅವಕಾಶ ಸಿಗುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಕರ್ನಾಟಕದ ಪ್ರಮುಖ ಐಟಿ ಕಂಪನಿಗಳು ಹಾಗೂ ಉದ್ಯಮ ಸಂಸ್ಥೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ದೊರೆಯುತ್ತಿರುವ ಉದ್ಯೋಗ ಪ್ರಾತಿನಿಧ್ಯದ ಬಗ್ಗೆ ಸರ್ಕಾರ ಸಮಗ್ರ ಮತ್ತು ಪಾರದರ್ಶಕ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ನೇಮಕಾತಿ ಪ್ರಕ್ರಿಯೆಯಲ್ಲಿ ಭಾಷೆ ಅಥವಾ ಸ್ಥಳೀಯತೆಯ ಆಧಾರದಲ್ಲಿ ತಾರತಮ್ಯ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಕಂಪನಿಗಳ ಉನ್ನತ ಹುದ್ದೆಗಳಲ್ಲಿ ಸ್ಥಳೀಯರ ಪ್ರಾತಿನಿಧ್ಯ ಎಷ್ಟಿದೆ ಎಂಬುದರ ಬಗ್ಗೆಯೂ ಮಾಹಿತಿ ಸಂಗ್ರಹಿಸಬೇಕು. ಇಂಗ್ಲಿಷ್ ಮಾತನಾಡುವ ಸಾಮರ್ಥ್ಯವನ್ನೇ ಅರ್ಹತೆಯ ಮಾನದಂಡವನ್ನಾಗಿ ಪರಿಗಣಿಸದೆ, ಅಭ್ಯರ್ಥಿಗಳ ಜ್ಞಾನ, ಕೌಶಲ್ಯ ಮತ್ತು ಕೆಲಸದ ಸಾಮರ್ಥ್ಯಕ್ಕೂ ಆದ್ಯತೆ ನೀಡಬೇಕು ಎಂದರು.
ಬೇರೆ ರಾಜ್ಯಗಳಿಂದ ಉದ್ಯೋಗ ಅರಸಿ ಕರ್ನಾಟಕಕ್ಕೆ ಬರುವವರ ವಿರೋಧ ನಮ್ಮದಲ್ಲ. ಆದರೆ ಕರ್ನಾಟಕದಲ್ಲಿ ಬದುಕು ಕಟ್ಟಿಕೊಳ್ಳುವವರು ಇಲ್ಲಿನ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸ್ಥಳೀಯರ ಭಾವನೆಗಳಿಗೆ ಗೌರವ ನೀಡಬೇಕು. ಕನ್ನಡ ಕಲಿಯುವುದು ಹಾಗೂ ಕನ್ನಡಿಗರೊಂದಿಗೆ ಬೆರೆಯುವುದು ಈ ನೆಲದ ಬಗ್ಗೆ ಇರಬೇಕಾದ ಕನಿಷ್ಠ ಗೌರವವಾಗಿದೆ ಎಂದು ತಿಳಿಸಿದರು.
ಸ್ಥಳೀಯ ಯುವಜನರಿಗೆ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ತರಬೇತಿ ಹೆಚ್ಚಿಸಬೇಕು, ಕಂಪನಿಗಳ ನೇಮಕಾತಿಯಲ್ಲಿ ತಾರತಮ್ಯದ ದೂರುಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಕನ್ನಡಿಗರಿಗೆ ನ್ಯಾಯಯುತ ಉದ್ಯೋಗಾವಕಾಶ ದೊರೆಯುವಂತೆ ಸರ್ಕಾರ ಸೂಕ್ತ ನೀತಿ ರೂಪಿಸಬೇಕು ಎಂದು ಆಗ್ರಹಿಸಿದರು.
ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ; ಕನ್ನಡಿಗರಿಗೆ ಸಿಗಬೇಕಾದ ನ್ಯಾಯಯುತ ಉದ್ಯೋಗಾವಕಾಶಗಳಿಗಾಗಿ. ನಮ್ಮ ನೆಲದಲ್ಲಿ ನಮ್ಮ ಮಕ್ಕಳಿಗೂ ಉದ್ಯೋಗ ದೊರೆಯಬೇಕು, ಅವರ ಪ್ರತಿಭೆಗೆ ಸೂಕ್ತ ಮನ್ನಣೆ ಸಿಗಬೇಕು ಎಂಬುದೇ ಮಲೆನಾಡು ರಕ್ಷಣಾ ಸೇನೆಯ ಸ್ಪಷ್ಟ ನಿಲುವು ಎಂದು ಮಂಜುದೇವ್ ಹೇಳಿದರು.
PublicNext
03/11/2026 08:41 pm