ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ : ಫೋಟೋ ವಿಚಾರಕ್ಕೆ ಕಿರುಕುಳ ಆರೋಪ ; ವಿಷ ಸೇವಿಸಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು!

ಹಾಸನ : ಯುವಕನೊಬ್ಬ ಪ್ರೀತಿಸುವಂತೆ ಒತ್ತಾಯಿಸಿ, ಒಟ್ಟಿಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮನನೊಂದ 23 ವರ್ಷದ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಬಾಳಗೋಡು ಗ್ರಾಮದಲ್ಲಿ ನಡೆದಿದೆ.

ಹಿಮಾ (23) ಮೃತ ಯುವತಿ. ಬಾಳಗೋಡು ಗ್ರಾಮದ ನಾಗೇಶ್ ಮತ್ತು ಭವಿತ ದಂಪತಿಯ ಏಕೈಕ ಪುತ್ರಿಯಾಗಿದ್ದ ಹಿಮಾ, ಮಂಗಳೂರಿನ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಳು. ಆಕೆಯ ಪರಿಚಿತನಾಗಿದ್ದ ನೌಶಾದ್ ಎಂಬಾತನ ವಿರುದ್ಧ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.

ಹಿಮಾ ಮತ್ತು ನೌಶಾದ್ ಬಾಲ್ಯದಲ್ಲಿ ಒಂದೇ ಕಡೆ ಪ್ರಾಥಮಿಕ ಶಿಕ್ಷಣ ಪಡೆದಿದ್ದರು ಎನ್ನಲಾಗಿದೆ. ಪರಿಚಯದ ಹಿನ್ನೆಲೆಯಲ್ಲಿ ಇಬ್ಬರೂ ಪ್ರವಾಸಕ್ಕೂ ತೆರಳಿದ್ದರು. ಈ ವೇಳೆ ತೆಗೆದಿದ್ದ ಫೋಟೋಗಳನ್ನು ನೌಶಾದ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ಅಲ್ಲದೆ, ಇನ್ನಷ್ಟು ಫೋಟೋಗಳನ್ನು ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಫೋಟೋಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕುವಂತೆ ಹಿಮಾ ಹಲವು ಬಾರಿ ಮನವಿ ಮಾಡಿದ್ದರೂ ಆತ ಸ್ಪಂದಿಸಿರಲಿಲ್ಲ ಎಂದು ಆರೋಪಿಸಲಾಗಿದೆ. ಇದರಿಂದ ತೀವ್ರವಾಗಿ ಮನನೊಂದಿದ್ದ ಯುವತಿ, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವಿಷ ಸೇವಿಸಿದ್ದಾಳೆ. ತಕ್ಷಣ ಆಕೆಯನ್ನು ರಕ್ಷಿಸುವ ಪ್ರಯತ್ನ ನಡೆಸಿದರೂ ಜೀವ ಉಳಿಸಲಾಗಲಿಲ್ಲ.

ಮಗಳನ್ನು ಕಳೆದುಕೊಂಡ ಪೋಷಕರ ದುಃಖ ಮುಗಿಲು ಮುಟ್ಟಿದೆ. ಇತ್ತೀಚೆಗಷ್ಟೇ ಹಿಮಾಳ ತಂದೆ ನಾಗೇಶ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎನ್ನಲಾಗಿದೆ. ಶಾಸಕ ಸಿಮೆಂಟ್ ಮಂಜು ಅವರು ಮೃತ ಯುವತಿಯ ಅಂತಿಮ ದರ್ಶನ ಪಡೆದು, ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಸಂಬಂಧ ನೌಶಾದ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Edited By :
PublicNext

PublicNext

01/11/2026 12:02 pm

Cinque Terre

3.32 K

Cinque Terre

0

ಸಂಬಂಧಿತ ಸುದ್ದಿ