ಸಕಲೇಶಪುರ: ಅಯೋಧ್ಯೆ ಬಲಿದಾನ ದಿವಸದ ಅಂಗವಾಗಿ ಹಿಂದೂ ಹಿತರಕ್ಷಣಾ ವೇದಿಕೆಯ ವತಿಯಿಂದ ಪಟ್ಟಣದ ಪುರಭವನದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದ್ದು, 187ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಿಸುವ ಮೂಲಕ ಶಿಬಿರ ಯಶಸ್ವಿಯಾಯಿತು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಹೋರಾಟದ ಸಂದರ್ಭದಲ್ಲಿ ಬಲಿದಾನಗೈದ ಕೊಠಾರಿ ಸಹೋದರರ ತ್ಯಾಗವನ್ನು ಸ್ಮರಿಸುವುದರ ಜೊತೆಗೆ, ವಿಶ್ವ ಹಿಂದೂ ಪರಿಷತ್ತಿನ ಹಿರಿಯ ಮುಖಂಡ ಹಾಗೂ ರಾಮಮಂದಿರ ಹೋರಾಟದ ಪ್ರಮುಖ ನಾಯಕರಾಗಿದ್ದ ಅಶೋಕ್ ಸಿಂಘಾಲ್ ಅವರ ಜನ್ಮಶತಾಬ್ದಿ ಅಂಗವಾಗಿಯೂ ಶಿಬಿರ ಹಮ್ಮಿಕೊಳ್ಳಲಾಗಿತ್ತು. ದುಬೈನಿಂದ ಇಸ್ರೇಲ್ಗೆ ತೆರಳುತ್ತಿದ್ದ ವಿಮಾನದಲ್ಲಿದ್ದ 175 ಜನರ ಪ್ರಾಣ ಉಳಿಸಿದ ಸಾಹಸಿ ಪೈಲಟ್ ಸ್ಮಿತ್ ಮಚ್ಚರ್ ಅವರ ಸಾಹಸವನ್ನೂ ಸ್ಮರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಸಂಘಟನೆಯ ಕಾರ್ಯಕರ್ತರಿಗೆ ಸದಾ ಬೆನ್ನೆಲುಬಾಗಿ ನಿಂತಿದ್ದ ಬಾಚೇಹಳ್ಳಿ ಪ್ರತಾಪ್ ಗೌಡರ ನಿಧನಕ್ಕೆ ಶೋಕಾಚರಣೆ ಸಲ್ಲಿಸಿ, ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಘಟನೆಯ ಕಾರ್ಯಚಟುವಟಿಕೆಗಳಿಗೆ ದೀರ್ಘಕಾಲದಿಂದ ಸಹಕಾರ ನೀಡಿದ್ದ ಅವರು, ಕಾರ್ಯಕರ್ತರ ಕಷ್ಟ-ಸುಖಗಳಲ್ಲಿ ಭಾಗಿಯಾಗುವುದರ ಜೊತೆಗೆ, ಕಾರ್ಯಕರ್ತರ ವಿರುದ್ಧ ಪ್ರಕರಣಗಳು ದಾಖಲಾದ ಸಂದರ್ಭಗಳಲ್ಲಿಯೂ ಬೆಂಬಲವಾಗಿ ನಿಂತಿದ್ದ ಸೇವೆಯನ್ನು ಸ್ಮರಿಸಲಾಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಚಂಚಲ ಕುಮಾರ್ ಸ್ವಾಮಿ ಅವರು, ಪ್ರತಾಪ್ ಗೌಡರು ಸಂಘಟನೆಗೆ ನೀಡಿದ ಬೆಂಬಲದಂತೆ ತಾವು ಕೂಡ ಸದಾ ಸಂಘಟನೆ ಹಾಗೂ ಕಾರ್ಯಕರ್ತರೊಂದಿಗೆ ಇರುವುದಾಗಿ ಭರವಸೆ ನೀಡಿದರು. ರಕ್ತದಾನಕ್ಕೆ ಬಡವ-ಶ್ರೀಮಂತ ಎಂಬ ಭೇದವಿಲ್ಲ. ಸೇವಾ ಮನೋಭಾವ ಮತ್ತು ಸಹಾಯ ಮಾಡುವ ಹೃದಯವಿದ್ದರೆ ಸಾಕು. ಪ್ರತಾಪ್ ಗೌಡರು ಸಮಾಜಕ್ಕೆ ನೀಡಿದ ಕೊಡುಗೆಯ ಮಾದರಿಯಲ್ಲಿ ಇಂದು ಕಾರ್ಯಕರ್ತರು ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.
ಲಯನ್ಸ್ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ್ ಮಾತನಾಡಿ, ರಕ್ತದಾನ ಮಹಾದಾನವಾಗಿದ್ದು, ಇಂತಹ ಶಿಬಿರಗಳು ಜನರಲ್ಲಿ ರಕ್ತದಾನದ ಮಹತ್ವ ಹಾಗೂ ಸೇವಾ ಮನೋಭಾವವನ್ನು ಬೆಳೆಸಲು ಸಹಕಾರಿಯಾಗಿವೆ ಎಂದು ತಿಳಿಸಿದರು.
ಜೀವ ರಕ್ಷಣಾ ನಿಧಿಯ ವ್ಯವಸ್ಥಾಪಕಿ ಸೀತಾಮೋಹನ್, ಹಾಸನ ರಕ್ತಕೇಂದ್ರದ ವ್ಯವಸ್ಥಾಪಕ ಕಾಂತರಾಜು, ಹಿಂದೂ ಹಿತರಕ್ಷಣಾ ವೇದಿಕೆಯ ತಾಲ್ಲೂಕು ಗೋರಕ್ಷ ಪ್ರಮುಖ ದೀಪಕ್ ಹಾಗೂ ಎಚ್ಡಿಎಫ್ಸಿ ಬ್ಯಾಂಕ್ನ ಮಂಜುಳಾ ಉಪಸ್ಥಿತರಿದ್ದರು. ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು ಹಾಗೂ ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ವಿಶೇಷವಾಗಿ ಮಹಿಳೆಯರೂ ಉತ್ಸಾಹದಿಂದ ಪಾಲ್ಗೊಂಡು ಮಾನವೀಯ ಸೇವೆಗೆ ಕೈಜೋಡಿಸಿದ್ದು ಗಮನ ಸೆಳೆಯಿತು. ಒಟ್ಟಾರೆ 187ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿ ಜೀವ ಉಳಿಸುವ ಮಹತ್ಕಾರ್ಯಕ್ಕೆ ತಮ್ಮ ಕೊಡುಗೆ ನೀಡಿದರು.
ಬಲಿದಾನಿಗಳ ತ್ಯಾಗವನ್ನು ಸ್ಮರಿಸುವುದರ ಜೊತೆಗೆ, ರಕ್ತದಾನದ ಮೂಲಕ ಸಮಾಜಕ್ಕೆ ಜೀವ ಉಳಿಸುವ ಸಂದೇಶ ಸಾರಿದ ಈ ಶಿಬಿರವು ಅಯೋಧ್ಯೆ ಬಲಿದಾನ ದಿವಸದ ಆಚರಣೆಗೆ ಅರ್ಥಪೂರ್ಣ ಮೆರುಗು ನೀಡಿತು. ಈ ಸಂದರ್ಭದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯ ಮುಖಂಡರಾದ ಮಂಜುನಾಥ್ ಕಬ್ಬಿನಗದ್ದೆ, ಕೌಶಿಕ್ ಹೆಚ್.ಎಂ., ಶಿವು ಜಿಪ್ಪಿ, ರವಿ ಹೆಬ್ಬಸಾಲೆ, ದೀಪಕ್, ಹರೀಶ್, ಶ್ರೀಜಿತ್ ಗೌಡ, ವಿಜಿತ್ ಗೌಡ, ಶೇಖರ್ ಸಿದ್ದಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
PublicNext
03/11/2026 05:15 pm