ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಯತೀಂದ್ರಗೆ ಮೈಸೂರಿನ ಇತಿಹಾಸ ತಿಳಿದಿಲ್ಲ, ರಾಜ ಮನೆತನ ಬಗ್ಗೆ ಹಗುರ ಮಾತು ಸರಿಯಲ್ಲ; ಎಚ್. ವಿಶ್ವನಾಥ್

ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮೈಸೂರು ರಾಜಮನೆತನದ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಅವರಿಗೆ ಮೈಸೂರಿನ ಇತಿಹಾಸದ ಅರಿವಿಲ್ಲದಂತಿದೆ. ಇನ್ನಾದರೂ ಮೈಸೂರಿನ ಇತಿಹಾಸವನ್ನು ಓದಿ, ರಾಜಮನೆತನದ ಹಿನ್ನೆಲೆ ತಿಳಿದುಕೊಳ್ಳಬೇಕು ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಸಲಹೆ ನೀಡಿದರು.

ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುಭವವಿಲ್ಲದವರಿಗೆ ಜವಾಬ್ದಾರಿ ನೀಡಿದರೆ ಏನಾಗುತ್ತದೆ ಎಂಬುದಕ್ಕೆ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಸಾಕ್ಷಿಯಾಗಿದೆ. ಯತೀಂದ್ರ ಜಂಭದ ಕೋಳಿಯಂತೆ ಮಾತನಾಡುವುದು ಶೋಭಾಯಮಾನವಲ್ಲ ಎಂದರು.

ಚಾಮುಂಡೇಶ್ವರಿ ಉಪಚುನಾವಣೆ ಸಂದರ್ಭದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರನ್ನು ಪ್ರಚಾರಕ್ಕೆ ಬರುವಂತೆ ಮನವಿ ಮಾಡಿದ್ದೆವು. ಅಂದು ಮಹಾರಾಜರು ಪ್ರಚಾರಕ್ಕೆ ಬರದಿದ್ದರೆ ಸಿದ್ದರಾಮಯ್ಯ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ, ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ. ಆದರೆ ಸಿದ್ದರಾಮಯ್ಯ ಅವರೂ ಶ್ರೀಕಂಠದತ್ತ ಒಡೆಯರ್ ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಲಿಲ್ಲ ಎಂದು ಟೀಕಿಸಿದರು.

ರಾಜ ಮನೆತನಕ್ಕೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿರುವುದು ಸರಿಯಾಗಿದೆ ಎಂದ ಅವರು, ಮೈಸೂರಿನ ಇತಿಹಾಸ ಮತ್ತು ಪರಂಪರೆಯನ್ನು ಅರಿತು ಮಾತನಾಡಬೇಕು ಎಂದು ಕಿವಿಮಾತು ಹೇಳಿದರು.

ತಾವು ಸಂಪೂರ್ಣವಾಗಿ ಬರೆದಿರುವ ‘ಬಾಂಬೆ ಡೇಸ್’ ಪುಸ್ತಕವನ್ನು ಬಿಡುಗಡೆ ಮಾಡದಿರಲು ನಿರ್ಧರಿಸಿರುವುದಾಗಿ ಎಚ್. ವಿಶ್ವನಾಥ್ ಈ ಸಂದರ್ಭದಲ್ಲಿ ತಿಳಿಸಿದರು.

ಪುಸ್ತಕ ಬಿಡುಗಡೆ ಮಾಡಿದರೆ ರಾಜಕಾರಣದ ಬಗ್ಗೆ ಜನರಲ್ಲಿ ಮತ್ತಷ್ಟು ಅಸಹ್ಯ ಮೂಡಬಹುದು. ಈಗಾಗಲೇ ಜನರು ರಾಜಕೀಯದ ಬಗ್ಗೆ ಬೇಸರಗೊಂಡಿದ್ದಾರೆ. ಮತ್ತಷ್ಟು ಅಸಹ್ಯ ಮೂಡಿಸಲು ಇಷ್ಟವಿಲ್ಲ. ಹೀಗಾಗಿ ಪುಸ್ತಕವನ್ನು ಪ್ರಕಟಿಸದಿರಲು ನಿರ್ಧರಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಗೆಲುವಿನ ಕುರಿತು ಪ್ರತಿಕ್ರಿಯಿಸಿದ ಅವರು, ಈ ಚುನಾವಣೆಯಲ್ಲಿ ಪದವೀಧರರು ಮತ್ತು ಶಿಕ್ಷಕರು ಮಾತ್ರ ಮತ ಚಲಾಯಿಸಿದ್ದಾರೆ. ಆದರೆ, ಫಲಿತಾಂಶ ಪ್ರಕಟವಾದ ಕೂಡಲೇ ಬಿಜೆಪಿ ನಾಯಕರಾದ ವಿಜಯೇಂದ್ರ, ಆರ್. ಅಶೋಕ್ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು 2028ರಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿಯೂ ಬಿಜೆಪಿ ಸೋತಿದ್ದು, ಸಮಾಜವಾದಿ ಪಕ್ಷ ಗೆಲುವು ಸಾಧಿಸಿದೆ ಎಂದು ಉಲ್ಲೇಖಿಸಿದ ಅವರು, ವಿಧಾನ ಪರಿಷತ್ ಚುನಾವಣೆಯ ಫಲಿತಾಂಶವನ್ನೇ ಆಧಾರವಾಗಿಟ್ಟುಕೊಂಡು ರಾಜ್ಯದಲ್ಲಿ ಮುಂದಿನ ಸರ್ಕಾರದ ಬಗ್ಗೆ ತೀರ್ಮಾನಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

Edited By :
PublicNext

PublicNext

29/10/2026 06:28 pm

Cinque Terre

6.74 K

Cinque Terre

0

ಸಂಬಂಧಿತ ಸುದ್ದಿ