ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕುತೂಹಲ ಕೆರಳಿಸಿದ ವಿಜ್ಞಾನ ಪ್ರಯೋಗಗಳು

ಬೆಳಗಾವಿ: ಬೆಳಗಾವಿ ನಾಗನೂರು ಶ್ರೀ ಪ್ರಭುದೇವ ಸ್ವತಂತ್ರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ವಿಜ್ಞಾನ ಪ್ರಯೋಗಗಳು ಮತ್ತು ವಿಜ್ಞಾನ ಚಟುವಟಿಕೆಗಳ ಪ್ರದರ್ಶನ’ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಎಸ್‌ಎಸ್‌ಎಲ್‌ಸಿ ಪಠ್ಯ ಆಧರಿಸಿದ ಪ್ರಯೋಗಗಳನ್ನು ಕುತೂಹಲದಿಂದ ವೀಕ್ಷಿಸಿದ ಮಕ್ಕಳು ಇನ್ನಿಲ್ಲದ ಖುಷಿಯಿಂದ ಮರಳಿದರು.

ಅದರಲ್ಲೂ, ಜೀವವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪ್ರಯೋಗಗಳು ಹಾಗೂ ಪ್ರಾಯೋಗಿಕ ಪಾಠಗಳಿಂದ ಮಕ್ಕಳು ಅಚ್ಚರಿಗೊಂಡರು. ಮಾನವನ ದೇಹದ ಪ್ರಮುಖ ಅಂಗಾಂಗಗಳಾದ ಮಿದುಳು, ಹೃದಯ, ಕಿಡ್ನಿ, ಪುಪ್ಪಸಗಳು, ಕರಳು, ಮೂಳೆಗಳ ಭಾಗ ಹೀಗೆ ಎಲ್ಲವನ್ನೂ ನಿಜವಾದ ದೇಹದೊಂದಿಗೆ ವಿವರಣೆ ನೀಡಲಾಯಿತು. ಜೆ.ಎನ್. ಮೆಡಿಕಲ್‌ ಕಾಲೇಜಿನ ಅಂಗರಚನಾ ಶಾಸ್ತ್ರ ವಿಭಾಗದ ಇಬ್ಬರು ವೈದ್ಯರು ಹಾಗೂ ಇಬ್ಬರು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಈ ಚಟುವಟಿಕೆ ನಡೆಸಿಕೊಟ್ಟರು.

ನೈಜ ವ್ಯಕ್ತಿಯ ದೇಹದ ಭಾಗಗಳನ್ನು ವಿದ್ಯಾರ್ಥಿಗಳು ಬೆರಗುಗಣ್ಣಿನಿಂದ ನೋಡಿದರು. ಸುರಕ್ಷತಾ ಕವಚಗಳನ್ನು ಹಾಕಿಕೊಂಡು ಹಲವರು ಕೈಯಿಂದ ಮುಟ್ಟಿ ಅನುಭವ ಪಡೆದರು. ಇಷ್ಟು ವರ್ಷ ಪಾಠಗಳಲ್ಲಿ ಕೇಳಿದ್ದ, ಚಿತ್ರಗಳಲ್ಲಿ ಮಾತ್ರ ನೋಡಿದ್ದ ದೇಹದ ಭಾಗಗಳನ್ನು ಕಣ್ಣಿನ ಮುಂದೆಯೇ ನೋಡುವ ಅವಕಾಶ ಸಿಕ್ಕಿದ್ದಕ್ಕೆ ಚಿಣ್ಣರು ಹಿರಿಹಿರಿ ಹಿಗ್ಗಿದರು.

ರಸಾಯನ ವಿಜ್ಞಾನ, ಭೌತವಿಜ್ಞಾನ ವಿಷಯಗಳಿಗೂ ಸಂಬಂಧಿಸಿದ ಪ್ರಯೋಗಗಳನ್ನು ಸಂಪನ್ಮೂಲ ವ್ಯಕ್ತಿಗಳು ಮಾಡಿ ತೋರಿಸಿದರು. 10ನೇ ತರಗತಿ ಪಠ್ಯದಲ್ಲಿರುವ ವಿಜ್ಞಾನ ಪ್ರಯೋಗಗಳನ್ನು ಪ್ರಾಯೋಗಿಕವಾಗಿ ನೋಡಿ ಮನನ ಮಾಡಿಕೊಂಡರು. ಕಾಲೇಜಿನಲ್ಲಿರುವ ಮೂರು ಪ್ರಮುಖ ಪ್ರಯೋಗಾಲಯಗಳನ್ನೂ ಮಕ್ಕಳಿಗೆ ತೆರೆದಿಟ್ಟು, ಅಲ್ಲಿನ ಚಟುವಟಕೆಗಳನ್ನು ತೋರಿಸಲಾಯಿತು.

ಅದಕ್ಕಿಂತಲೂ ಮಕ್ಕಳ ಮನಸ್ಸನ್ನು ಸೆಳೆದಿದ್ದು ಎಐ ಆಧರಿತ ರೊಬಾಟಿಕ್‌ ತಂತ್ರಜ್ಞಾನದ ಪ್ರಯೋಗಗಳು. ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ ಪಾಠಕ್ಕಿಂತ ಪ್ರಯೋಗಗಳು ಎಷ್ಟು ಮುಖ್ಯ ಎಂಬುದನ್ನು ಈ ಕಾರ್ಯಕ್ರಮ ಸಿದ್ಧ ಮಾಡಿ ತೋರಿಸಿತು. ಕೊನೆಗೆ ಮಕ್ಕಳು ಕುತೂಹಲಕರ ಪ್ರಶ್ನೆಗಳನ್ನು ಕೇಳಿ, ಉತ್ತರ ಪಡೆದುಕೊಂಡರು.

ನಗರ ಮತ್ತು ಗ್ರಾಮೀಣ ಪ್ರದೇಶಗಳಿಂದ ಕನ್ನಡ, ಇಂಗ್ಲಿಷ್ ಮತ್ತು ಮರಾಠಿ ಮಾಧ್ಯಮದ 16 ಪ್ರೌಢಶಾಲೆಗಳ ಸುಮಾರು 500 ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ, ಕಾಲೇಜು ಪ್ರಾಂಶುಪಾಲರಾದ ಸ್ವಪ್ನಾ ಜೋಶಿ ಹಾಗೂ ಎಲ್ಲ ಸಿಬ್ಬಂದಿ ಯಶಸ್ಸಿಗೆ ಶ್ರಮಿಸಿದರು.

Edited By : Vinayak Patil
PublicNext

PublicNext

29/10/2026 07:58 pm

Cinque Terre

10.2 K

Cinque Terre

0

ಸಂಬಂಧಿತ ಸುದ್ದಿ