ಉಡುಪಿ: ಹಳೆಯ ಉಪಕರಣಗಳ ಸ್ಥಳಾಂತರಕ್ಕೆ ಆಕ್ಷೇಪ; ಹೊಸ ವೈದ್ಯಕೀಯ ಸೌಲಭ್ಯ, ಸಿಬ್ಬಂದಿ ನೇಮಕಕ್ಕೆ ಆಗ್ರಹ
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಉಡುಪಿಯ ನೂತನ ಜಿಲ್ಲಾಸ್ಪತ್ರೆಯನ್ನು ಸಂಪೂರ್ಣ ವೈದ್ಯಕೀಯ ಸೌಲಭ್ಯಗಳೊಂದಿಗೆ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವರು ನ.15ರೊಳಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ಲೋಕಾರ್ಪಣೆಯ ದಿನಾಂಕ ಘೋಷಿಸಬೇಕು ಎಂದು ಶಾಸಕ ಯಶ್ಪಾಲ್ ಎ. ಸುವರ್ಣ ಒತ್ತಾಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತ್ಯೇಕಗೊಂಡು ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬಂದು 28 ವರ್ಷಗಳಾದರೂ ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾಗಿರುವ ಸುಸಜ್ಜಿತ ಜಿಲ್ಲಾಸ್ಪತ್ರೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2021ರಲ್ಲಿ ನೂತನ ಜಿಲ್ಲಾಸ್ಪತ್ರೆಯ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, 2023ರಲ್ಲಿಯೇ ಕಟ್ಟಡ ಬಹುತೇಕ ಪೂರ್ಣಗೊಂಡಿದೆ. ಆದರೂ ಆಸ್ಪತ್ರೆ ಈವರೆಗೆ ಸಾರ್ವಜನಿಕರ ಸೇವೆಗೆ ಲಭ್ಯವಾಗಿಲ್ಲ. ಕಳೆದ ಮೂರೂವರೆ ವರ್ಷಗಳಿಂದ ವೈಯಕ್ತಿಕವಾಗಿ, ಪತ್ರಗಳ ಮೂಲಕ ಹಾಗೂ ವಿಧಾನಮಂಡಲದ ಅಧಿವೇಶನಗಳಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುತ್ತಿದ್ದರೂ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಹಿಂದಿನ ಮತ್ತು ಪ್ರಸ್ತುತ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕಾರ್ಯಾರಂಭದ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟವಾಗಿಲ್ಲ ಎಂದರು.ಇತ್ತೀಚೆಗೆ ಹಳೆಯ ಆಸ್ಪತ್ರೆಯಲ್ಲಿದ್ದ ಸುಮಾರು 30 ವರ್ಷಗಳಷ್ಟು ಹಳೆಯದಾದ, ಜೀರ್ಣಾವಸ್ಥೆಯಲ್ಲಿರುವ ಹಾಗೂ ತುಕ್ಕು ಹಿಡಿದ ಮಂಚಗಳು, ಕಪಾಟುಗಳು ಮತ್ತು ಇತರ ಉಪಕರಣಗಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲು ಇಲಾಖೆ ಮುಂದಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. 250 ಹಾಸಿಗೆಗಳ ಆರು ಮಹಡಿಗಳ ಆಸ್ಪತ್ರೆಯನ್ನು ಸೂಕ್ತವಾಗಿ ಸಜ್ಜುಗೊಳಿಸದೆ ಹಳೆಯ ಉಪಕರಣಗಳನ್ನು ಸ್ಥಳಾಂತರಿಸುವ ಕ್ರಮಕ್ಕೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.ನೂತನ ಆಸ್ಪತ್ರೆಯ ಮೂಲ ಯೋಜನೆಗೆ ಅನುಗುಣವಾಗಿ ಗುಣಮಟ್ಟದ ಹೊಸ ಪೀಠೋಪಕರಣಗಳು, ಆಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ಅಗತ್ಯ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಬೇಕು. ಎಂಆರ್‌ಐ, ಸಿಟಿ ಸ್ಕ್ಯಾನಿಂಗ್, ಡಿಜಿಟಲ್ ಎಕ್ಸ್‌ರೇ, ತೀವ್ರ ನಿಗಾ ಘಟಕ (ಐಸಿಯು), ವೆಂಟಿಲೇಟರ್ ಸೇರಿದಂತೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಬೇಕು. ಅಲ್ಲದೆ, ವೈದ್ಯರು, ತಜ್ಞ ವೈದ್ಯರು, ಶುಶ್ರೂಷಕರು ಹಾಗೂ ತಾಂತ್ರಿಕ ಸಿಬ್ಬಂದಿ ಸೇರಿದಂತೆ ಅಗತ್ಯ ಹುದ್ದೆಗಳನ್ನು ಮಂಜೂರು ಮಾಡಿ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
PublicNext
30/10/2026 07:25 pm