ಮಂಗಳೂರು : ಹಿಮಾಲಯದ ಕೊರೆಯುವ ಚಳಿ, ಎದುರಾದ ಕಠಿಣ ಸವಾಲುಗಳು.. ಆದರೂ ಛಲ ಬಿಡದ ನಾಲ್ವರು ಗೆಳೆಯರು ಮಂಗಳೂರಿನಿಂದ ಆಟೋರಿಕ್ಷಾದಲ್ಲೇ 7,700ಕ್ಕೂ ಅಧಿಕ ಕಿ.ಮೀ. ಕ್ರಮಿಸಿ ಕಾಶ್ಮೀರ ಹಾಗೂ ಲೇಹ್-ಲಡಾಖ್ ಸಾಹಸಯಾತ್ರೆ ಕೈಗೊಂಡು ಮರಳಿದ್ದಾರೆ.
ಇದು ಮಂಗಳೂರಿನ ದೇರಳಕಟ್ಟೆಯ ಹಸನ್, ಸಾದಿಕ್, ಅಫ್ರೀದ್ ಹಾಗೂ ಅಜೀಮ್ ಎಂಬ ನಾಲ್ವರು ಯುವಕರ ಸಾಹಸಗಾಥೆ. ಅ. 10ರಂದು ಏಕಾಏಕಿ ಪ್ರಯಾಣ ಆರಂಭಿಸಿದ ಇವರು, ನ. 3ರಂದು ಸಾಹಸಯಾತ್ರೆ ಮುಗಿಸಿ ಮರಳಿದ್ದಾರೆ. ಈ ಸಾಹಸಯಾತ್ರೆಗಾಗಿ ಎರಡು ಬಾರಿ ಆಟೋ ಖರೀದಿಸಿದ್ದರೂ, ಸಮಯ ಕೂಡಿ ಬಾರದ ಕಾರಣ ಅವುಗಳನ್ನು ಮಾರಾಟ ಮಾಡಿದ್ದರು. ಕೊನೆಗೆ ಸಾದಿಕ್ ಬಳಿಯಿದ್ದ ಆಟೋರಿಕ್ಷಾವನ್ನೇ ಸಜ್ಜುಗೊಳಿಸಿ ಸಾಹಸಯಾತ್ರೆ ಕೈಗೊಂಡಿದ್ದರು.
ಮಂಗಳೂರಿನಿಂದ ಹೊರಟು ಬಿಜಾಪುರ, ಗುಜರಾತ್, ಮಹಾರಾಷ್ಟ್ರದ ಔರಂಗಾಬಾದ್, ಆಗ್ರಾ, ದೆಹಲಿ ಹಾಗೂ ಪಂಜಾಬ್ ಮೂಲಕ ಕಾಶ್ಮೀರ ತಲುಪಿದ್ದಾರೆ. ಅಲ್ಲಿ ಪಹಲ್ಗಾಮ್, ಗುಲ್ಮಾರ್ಗ್, ಸೋನ್‌ಮಾರ್ಗ್ ಪ್ರವಾಸ ಕೈಗೊಂಡು, ಕಾರ್ಗಿಲ್ ಮೂಲಕ ಲೇಹ್-ಲಡಾಖ್ ತಲುಪಿದ್ದಾರೆ.
ಬೈಟ್: ಅಫ್ರೀದ್ – ಸಾಹಸಯಾತ್ರೆ ಕೈಗೊಂಡವರು
ಲೇಹ್‌ನಿಂದ ಮನಾಲಿಗೆ ತೆರಳುವ ಮಾರ್ಗದಲ್ಲಿ 17,500 ಅಡಿ ಎತ್ತರದ ಪರ್ವತ ಪ್ರದೇಶದಲ್ಲಿ ಆಟೋ ಕೈಕೊಟ್ಟಿದೆ. ಮೈನಸ್ 14ರಿಂದ 16 ಡಿಗ್ರಿ ತಾಪಮಾನ, ಕೊರೆಯುವ ಚಳಿ, ಜಾಮ್ ಆದ ಗೇರ್, ಉಸಿರಾಟದ ತೊಂದರೆ, ತಲೆತಿರುಗುವಿಕೆ ಸೇರಿದಂತೆ ಹಲವು ಸಂಕಷ್ಟಗಳನ್ನು ಎದುರಿಸಿದ್ದಾರೆ.
ಈ ವೇಳೆ ನೆರವಿಗೆ ಬಂದ ಲಾರಿ ಚಾಲಕರು ಆಕ್ಸಿಜನ್ ಮಾತ್ರೆ ಹಾಗೂ ನೀರು ನೀಡಿ ಸಹಾಯ ಮಾಡಿದ್ದಾರೆ. ಬಳಿಕ ಹೋಮ್‌ಸ್ಟೇಯಲ್ಲಿ ರಾತ್ರಿ ಕಳೆದು, ಮರುದಿನ ಮತ್ತೆ ಆಟೋ ಬಳಿ ತೆರಳಿ ಒಂದೂವರೆ ಗಂಟೆಗೂ ಅಧಿಕ ಕಾಲ ಶ್ರಮಿಸಿ ಗೇರ್ ಸರಿಪಡಿಸಿದ್ದಾರೆ. ಕೊನೆಗೂ ಆಟೋ ಸ್ಟಾರ್ಟ್ ಮಾಡಿ ಕೆಳಗಿಳಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೂಲಕ ಸಾಹಸಯಾತ್ರೆಗೆ ದೊಡ್ಡ ವಾಹನವೇ ಬೇಕಿಲ್ಲ, ದೊಡ್ಡ ಕನಸು ಮತ್ತು ಅದನ್ನು ನನಸಾಗಿಸುವ ಛಲವಿದ್ದರೆ ಸಾಕು ಎಂಬುದನ್ನು ಈ ನಾಲ್ವರು ಗೆಳೆಯರು ನಿರೂಪಿಸಿದ್ದಾರೆ.
PublicNext
04/11/2026 04:43 pm