ಬಳ್ಳಾರಿ : ನಗರದ ಎಸ್ಪಿ ವೃತ್ತದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡು, ₹1.18 ಕೋಟಿ ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ಅವರ ಬೃಹತ್ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. ಆದರೆ, ಜನವರಿ 1ರಂದು ನಡೆದ ಗಲಾಟೆ ಮತ್ತು ಗುಂಡಿನ ದಾಳಿಯ ಬಳಿಕ ಹತ್ತು ತಿಂಗಳು ಕಳೆದರೂ ಪುತ್ಥಳಿ ಅನಾವರಣಕ್ಕೆ ಮಾತ್ರ ಮುಹೂರ್ತ ಕೂಡಿ ಬಂದಿಲ್ಲ. ಸರ್ಕಾರದಿಂದಲೇ ಅನಾವರಣಕ್ಕೆ ಅನುಮತಿ ದೊರೆತಿದ್ದರೂ, ಜಿಲ್ಲಾಡಳಿತ ಇನ್ನೂ ನಿರ್ಣಾಯಕ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಹರ್ಷಿ ವಾಲ್ಮೀಕಿ ಅವರ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ, ಅವರ ಪುತ್ಥಳಿ ಅನಾವರಣ ಮಾಡಲು ಮಾತ್ರ ಸಮಯವಿಲ್ಲವೇ? ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಅವರು ದೊಡ್ಡ ಮಟ್ಟದಲ್ಲಿ ಅನಾವರಣ ಕಾರ್ಯಕ್ರಮ ನಡೆಸಬೇಕೆಂಬ ನಿಲುವು ಹೊಂದಿದ್ದಾರೆ ಎನ್ನಲಾಗುತ್ತಿದೆ. ಆದರೆ, ಕಾರ್ಯಕ್ರಮದ ವೈಭವ ಮತ್ತು ರಾಜಕೀಯ ಪ್ರತಿಷ್ಠೆಗಿಂತ ಮಹರ್ಷಿಗಳಿಗೆ ಗೌರವ ಸಲ್ಲಿಸುವುದು ಮುಖ್ಯವಲ್ಲವೇ? ಶಾಸಕರು, ಸರ್ಕಾರ ಮತ್ತು ಜಿಲ್ಲಾಡಳಿತದ ನಡುವಿನ ಸಮನ್ವಯದ ಕೊರತೆಯಿಂದಲೇ ಈ ವಿಳಂಬವಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ.
ಇನ್ನೊಂದೆಡೆ, ಬಿಜೆಪಿ ನಡೆಸಿದ ಬಳ್ಳಾರಿ ಚಲೋ ಮತ್ತು ಕಾಂಗ್ರೆಸ್ನ ರಾಜಕೀಯ ಕಾರ್ಯಕ್ರಮಗಳ ನಡುವೆ ವಾಲ್ಮೀಕಿ ಪುತ್ಥಳಿ ವಿಚಾರವೂ ರಾಜಕೀಯ ಚರ್ಚೆಯ ಕೇಂದ್ರವಾಗಿದೆ. ಯಾವ ಪಕ್ಷಕ್ಕೆ ಹೆಸರು ಬರಬೇಕು, ಯಾವ ನಾಯಕನ ನೇತೃತ್ವದಲ್ಲಿ ಅನಾವರಣ ನಡೆಯಬೇಕು ಎಂಬ ಪ್ರತಿಷ್ಠೆಯ ಪೈಪೋಟಿ ನಡೆಯುತ್ತಿದೆಯೇ ಎಂಬ ಅನುಮಾನಗಳಿಗೂ ಅವಕಾಶ ಸೃಷ್ಟಿಯಾಗಿದೆ. ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರಗಳ ನಡುವೆ ಮಹರ್ಷಿ ವಾಲ್ಮೀಕಿ ಅವರ ಗೌರವವನ್ನು ಮರೆಯಲಾಗುತ್ತಿದೆಯೇ?
ಅಕ್ಟೋಬರ್ 26ರಂದು ನಡೆದ ವಾಲ್ಮೀಕಿ ಜಯಂತಿಯಂದೂ ಪುತ್ಥಳಿ ಪ್ಲಾಸ್ಟಿಕ್ ಹೊದಿಕೆಯಿಂದ ಮುಕ್ತಿ ಪಡೆಯಲಿಲ್ಲ. ಬದಲಾಗಿ, ಹೊದಿಕೆಯೊಳಗಿರುವ ಮೂರ್ತಿಗೆ ಕೆಲ ವಾಲ್ಮೀಕಿ ಮುಖಂಡರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಘಟನೆ ನಡೆದಿದೆ. ಮಹರ್ಷಿಗಳ ಜಯಂತಿಯಂದೇ ಅವರ ಪುತ್ಥಳಿಯನ್ನು ಸಾರ್ವಜನಿಕವಾಗಿ ಅನಾವರಣಗೊಳಿಸಲು ಸಾಧ್ಯವಾಗದಿರುವುದು ಆಡಳಿತ ವ್ಯವಸ್ಥೆಗೆ ನಾಚಿಕೆಗೇಡಿನ ಸಂಗತಿಯಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಸರ್ಕಾರದ ಅನುಮತಿ ದೊರೆತಿದ್ದರೆ ಅನಾವರಣಕ್ಕೆ ಇರುವ ಅಡ್ಡಿಯೇನು? ಜಿಲ್ಲಾಡಳಿತ ಇನ್ನೂ ದಿನಾಂಕ ನಿಗದಿಪಡಿಸದಿರುವುದಕ್ಕೆ ಕಾರಣವೇನು? ಶಾಸಕರು ಮತ್ತು ರಾಜಕೀಯ ನಾಯಕರು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗದಿರುವುದೇಕೆ?
ಮಹರ್ಷಿ ವಾಲ್ಮೀಕಿ ಅವರ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು, ಮೊದಲು ಅವರ ಪುತ್ಥಳಿಗೆ ಗೌರವಯುತ ಅನಾವರಣ ಕಲ್ಪಿಸಿ. ರಾಜಕೀಯ ಪ್ರತಿಷ್ಠೆಗಿಂತ ಮಹರ್ಷಿಗಳ ಗೌರವ ದೊಡ್ಡದು ಎಂಬುದನ್ನು ಸರ್ಕಾರ, ಶಾಸಕರು ಮತ್ತು ಜಿಲ್ಲಾಡಳಿತ ಅರಿತುಕೊಳ್ಳಲಿ. ಪ್ಲಾಸ್ಟಿಕ್ ಪರದೆ ತೆರೆಯುವುದು ಯಾವಾಗ? ಸಾರ್ವಜನಿಕರ ಈ ಪ್ರಶ್ನೆಗೆ ಉತ್ತರ ನೀಡುವವರು ಯಾರು?
ವರದಿ : ಹೊನ್ನೂರಸ್ವಾಮಿ ಕೆ. ಟಿ.
ಪಬ್ಲಿಕ್ ನೆಕ್ಸ್ಟ್, ಬಳ್ಳಾರಿ.
PublicNext
01/11/2026 08:06 pm