ವಿಜಯಪುರ : ಕೃಷ್ಣಾ ನದಿಯಿಂದ ಸುಮಾರು 40 ಟಿಎಂಸಿ ಅಡಿ ಪ್ರವಾಹದ ನೀರನ್ನು ಭೀಮಾ ನದಿಯ ಉಜನಿ ಜಲಾಶಯಕ್ಕೆ ವರ್ಗಾಯಿಸುವ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೆಜ್ಜೆ ಇರಿಸಿರುವುದು ಆಘಾತಕಾರಿ. ವಿಶ್ವ ಬ್ಯಾಂಕ್ ನೆರವಿನೊಂದಿಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದು ಅವರು ಬಲವಾಗಿ ಹೇಳಿದ್ದಾರೆ. ಈ ಯೋಜನೆ ನಮಗೆ ಅತ್ಯಂತ ಮಾರಕ. ಆದರೆ, ನಾವು ಈ ವಿಷಯದಲ್ಲಿ ರಾಜಿಯಾಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿ ಸರ್ವಪಕ್ಷ ಸಭೆ ಕರೆಯುವಂತೆ ವಿನಂತಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಂತ ಗಂಭೀರವಾದ ಮಹಾರಾಷ್ಟ್ರ ಸರ್ಕಾರದ ಈ ಕ್ರಮದ ಬಗ್ಗೆ ಈ ಹಿಂದೆ ಚರ್ಚೆಯಾಗಿರಲಿಲ್ಲ. ಆಕಸ್ಮಿಕವಾಗಿ ಸಹಕಾರ ಸಚಿವ ಲಕ್ಷ್ಮಣ ಸವದಿ ಅವರು ನನಗೆ ದೇವೇಂದ್ರ ಫಡ್ನವೀಸ್ ಅವರು ಮಾಧ್ಯಮ ಸಂಸ್ಥೆಯೊಂದರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಡಿಯೋ ತುಣುಕನ್ನು ಕಳುಹಿಸಿದರು. ಇದರಿಂದ ಮಹಾರಾಷ್ಟ್ರ ಸರ್ಕಾರ ಇಡುತ್ತಿರುವ ಈ ಹೆಜ್ಜೆಯ ಬಗ್ಗೆ ಅರಿವಾಯಿತು ಎಂದರು.
ಕೇಂದ್ರ ಸರ್ಕಾರ ಕೃಷ್ಣಾ ನ್ಯಾಯಾಧಿಕರಣದ ಅಂತಿಮ ಅಧಿಸೂಚನೆ ಹೊರಡಿಸಿಲ್ಲ. ಅಷ್ಟಾದರೂ ವಿಶ್ವ ಬ್ಯಾಂಕ್ ನೆರವು ಈ ನೂತನ ಯೋಜನೆಗೆ ದೊರೆತಿದೆ ಎಂದು ಮಹಾರಾಷ್ಟ್ರ ಸಿಎಂ ಹೇಳಿರುವುದು ಅನೇಕ ಗೊಂದಲ ಹಾಗೂ ಆತಂಕಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರದ ಅನುಮತಿ ಇಲ್ಲದೆ ವಿಶ್ವ ಬ್ಯಾಂಕ್ ನೆರವಿನ ಪ್ರಸ್ತಾವನೆ ಹೇಗೆ ಸಾಧ್ಯ? ಈ ಎಲ್ಲ ವಿಷಯಗಳಿಗೂ ಸ್ಪಷ್ಟೀಕರಣ ದೊರೆಯಬೇಕಿದೆ ಎಂದರು.
PublicNext
02/11/2026 11:34 am
LOADING...