ವಿಜಯಪುರ: ಕಿರಿಯ ನ್ಯಾಯವಾದಿ ಪ್ರವೀಣ್ ಹಾಗೂ ಅವರ ಕುಟುಂಬಸ್ಥರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ನ್ಯಾಯವಾದಿಗಳ ಆಕ್ರೋಶ ಮುಗಿಲು ಮುಟ್ಟಿದೆ. ಮಹಾನಗರ ಪಾಲಿಕೆ ಉಪ ಮೇಯರ್ ಪತಿ ರಾಜು ಜಾಧವ್ ಅವರ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ನ್ಯಾಯವಾದಿಗಳ ಸಂಘದ ನೇತೃತ್ವದಲ್ಲಿ ಎರಡನೇ ದಿನವೂ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರಿದಿದೆ. ನಗರದ ಪ್ರಮುಖ ರಸ್ತೆಯಲ್ಲಿ ರಸ್ತೆಯ ಮದ್ಯದಲ್ಲೇ ಟೆಂಟ್ ಹಾಕಿ ಧರಣಿ ಆರಂಭಿಸಿದ್ದಾರೆ.
ಹೌದು..!ವಿಜಯಪುರದ ಜಿಲ್ಲಾ ನ್ಯಾಯಾಲಯದ ಬಳಿಯಿರುವ ಕೋರ್ಟ್ ಸರ್ಕಲ್ ನಲ್ಲಿ ಈಗ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ರಸ್ತೆ ಮಧ್ಯದಲ್ಲೇ ಟೆಂಟ್ ಹಾಕಿ ಕುಳಿತಿರುವ ವಿಜಯಪುರ ಜಿಲ್ಲಾ ನ್ಯಾಯವಾದಿಗಳ ಸಂಘದ ಸದಸ್ಯರು ಮಹಾನಗರ ಪಾಲಿಕೆ ಆಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನ್ಯಾಯವಾದಿ ಪ್ರವೀಣ್ ಹಾಗೂ ಅವರ ಕುಟುಂಬದ ಮೇಲೆ ನಡೆದಿರುವ ಅಮಾನವೀಯ ಹಲ್ಲೆಯನ್ನು ಖಂಡಿಸಿ, ನಿನ್ನೆಯಿಂದಲೇ ನ್ಯಾಯವಾದಿಗಳು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಇನ್ನೂ ಮಹಾನಗರ ಪಾಲಿಕೆಯ ಜೆಇ ಅನಿಲ್ ರಾಠೋಡ ಪತ್ನಿ, ನ್ಯಾಯವಾದಿ ಪ್ರವೀಣ್ ಅವರ ಪತ್ನಿ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ವಿಚಾರವಾಗಿ ಪ್ರವೀಣ್ ಪ್ರಶ್ನಿಸಿದ್ದಕ್ಕೆ, ಪಾಲಿಕೆ ಉಪ ಮೇಯರ್ ಸುಮಿತ್ರಾ ಜಾಧವ್ ಅವರ ಪತಿ ರಾಜು ಜಾಧವ್ ಹಾಗೂ ಜೆಇ ಅನಿಲ್ ರಾಠೋಡ ನ್ಯಾಯವಾದಿ ಪ್ರವೀಣ್ ಮನೆಗೆ ಪ್ರವೇಶಿಸಿ ಅವರ ಹಾಗೂ ಕುಟುಂಬಸ್ಥರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದ್ದಾರೆ.
ಸದ್ಯ ಈಗಾಗಲೇ ಪೊಲೀಸ್ ಠಾಣೆಯಲ್ಲಿ ರಾಜು ಜಾಧವ್, ಜೆಇ ಅನಿಲ್ ರಾಠೋಡ ಹಾಗೂ ಅವರ ಪತ್ನಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೆ, ಘಟನೆ ನಡೆದಾಗಿನಿಂದ ಮುಖ್ಯ ಆರೋಪಿ ರಾಜು ಜಾಧವ್ ತಲೆ ಮರೆಸಿಕೊಂಡಿದ್ದು, ಪೊಲೀಸರು ಆತನನ್ನು ಬಂಧಿಸಲು ವಿಫಲರಾಗಿದ್ದಾರೆ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಪಾಲಿಕೆಯ ಅಧಿಕಾರಿ ಅನೀಲ ರಾಠೋಡ ಅಮಾನತ್ತಿಗೆ ನ್ಯಾಯವಾದಿಗಳು ಒತ್ತಾಯಿಸಿ ಧರಣಿ ನಡೆಸುತ್ತಿದ್ದು, ತಮ್ಮ ಬೇಡಿಕೆ ಈಡೇರುವವರೆಗೂ ಯಾವುದೇ ಕಾರಣಕ್ಕೂ ಧರಣಿ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂಬುದು ನ್ಯಾಯವಾದಿಗಳ ಮಾತು. ಪೊಲೀಸರು ಆದಷ್ಟು ಬೇಗ ರಾಜು ಜಾಧವ ಬಂಧಿಸುವ ಮೂಲಕ ಹೋರಾಟ ಅಂತ್ಯಗೊಳಿಸುತ್ತಾರಾ ಕಾದು ನೋಡಬೇಕಿದೆ.
ಪಬ್ಲಿಕ್ ನೆಕ್ಸ್ಟ ವಿಜಯಪುರ
PublicNext
04/11/2026 10:17 pm