ಮದುವೆಯಾಗಿ ಕೇವಲ ಐದೇ ತಿಂಗಳು ಕಳೆದಿತ್ತು. ಆದರೆ, ಪತ್ನಿ ತನ್ನ ಹಳೆಯ ಪ್ರೀತಿಯನ್ನು ಮರೆತಿರಲಿಲ್ಲ. ಪ್ರಿಯಕರನೊಂದಿಗಿನ ಸಂಪರ್ಕವೇ ದಂಪತಿ ನಡುವೆ ಜಗಳಕ್ಕೆ ಕಾರಣವಾಗಿತ್ತು. ಇದೇ ವಿಚಾರವಾಗಿ ಗಂಡನೊಂದಿಗೆ ಪದೇಪದೇ ಕಿರಿಕ್ ನಡೆಯುತ್ತಿತ್ತು. ಕೊನೆಗೆ, ಗಂಡನನ್ನೇ ಕೊಂದು ಪ್ರಿಯಕರನೊಂದಿಗೆ ಹೊಸ ಜೀವನ ಆರಂಭಿಸುವ ಸಂಚು ರೂಪಿಸಿದ ಪತ್ನಿ ತಡರಾತ್ರಿ ಮನೆಗೆ ಬಂದ ಪ್ರಿಯಕರನೊಂದಿಗೆ ಸೇರಿ, ನಿದ್ರೆಯಲ್ಲಿದ್ದ ಗಂಡನ ಕತ್ತು ಕುಡುಗೋಲಿನಿಂದ ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಳು. ಆದರೆ, ಆರೋಪಿಗಳ ಈ ಪ್ಲಾನ್ ಹೆಚ್ಚು ಹೊತ್ತು ನಡೆಯಲಿಲ್ಲ. ಪ್ರಕರಣದ ಗಂಭೀರತೆ ಅರಿತ ವಿಜಯಪುರ ಜಿಲ್ಲೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ಕೇವಲ 24 ಗಂಟೆಯೊಳಗೆ ಪತ್ನಿ ಹಾಗೂ ಆಕೆಯ ಅಪ್ರಾಪ್ತ ಪ್ರಿಯಕರನನ್ನು ಬಂಧಿಸಿದ್ದಾರೆ.
ಕಳೆದ ಅಕ್ಟೋಬರ್ 21ರಂದು ತಡರಾತ್ರಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ರೂಡಗಿ ಗ್ರಾಮದಲ್ಲಿ ಭೀಕರ ಕೊಲೆ ನಡೆದಿತ್ತು. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ 23 ವರ್ಷದ ಗಣೇಶ್ ಕೋಲಕಾರ್ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಮನೆಯಲ್ಲಿ ಮಲಗಿದ್ದ ಗಣೇಶ್‌ನ ಕತ್ತನ್ನು ಕುಡುಗೋಲಿನಿಂದ ಕೊಯ್ದು ಕೊಲೆ ಮಾಡಿ, ಪತ್ನಿ ಅಕ್ಷತಾ ಅಲಿಯಾಸ್ ಪೂಜಾ ಹಾಗೂ ಆಕೆಯ ಅಪ್ರಾಪ್ತ ವಯಸ್ಸಿನ ಪ್ರಿಯಕರ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಮಹಾರಾಷ್ಟ್ರ ಗಡಿಯ ಸಮೀಪ ಇಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ತನಿಖೆಯಲ್ಲಿ ಕೊಲೆಯ ಹಿಂದಿನ ಸಂಬಂಧದ ವಿಚಾರ ಬೆಳಕಿಗೆ ಬಂದಿದೆ. ಗಣೇಶ್‌ನನ್ನು ಮದುವೆಯಾಗಿ ಐದು ತಿಂಗಳಾಗಿದ್ದರೂ, 19 ವರ್ಷದ ಪೂಜಾ ತನ್ನ ಅಪ್ರಾಪ್ತ ವಯಸ್ಸಿನ ಪ್ರಿಯಕರನೊಂದಿಗೆ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ. ಫೋನ್‌ನಲ್ಲಿ ಪ್ರಿಯಕರನೊಂದಿಗೆ ಮಾತನಾಡುತ್ತಿದ್ದಾಗ ಗಂಡನ ಕೈಗೆ ಸಿಕ್ಕಿಬಿದ್ದಿದ್ದೇ ದಂಪತಿ ನಡುವೆ ಜಗಳಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಕೊಲೆಗೆ ಸಂಚು ರೂಪಿಸಿದ್ದ ಆರೋಪ ಕೇಳಿಬಂದಿದೆ. ತಡರಾತ್ರಿ ಪ್ರಿಯಕರನನ್ನು ಮನೆಗೆ ಕರೆಸಿಕೊಂಡ ಪೂಜಾ, ಇಬ್ಬರೂ ಸೇರಿ ಮಲಗಿದ್ದ ಗಣೇಶ್‌ನ ಕತ್ತನ್ನು ಕುಡುಗೋಲಿನಿಂದ ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದರು ಎನ್ನಲಾಗಿದೆ. ಪ್ರಕರಣ ಭೇದಿಸಿದ ಪೊಲೀಸರು ಪೂಜಾ ಹಾಗೂ ಆಕೆಯ ಅಪ್ರಾಪ್ತ ಪ್ರಿಯಕರನನ್ನು ಬಂಧಿಸಿದ್ದಾರೆ. ಸದ್ಯ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಇನ್ನು, ಆರೋಪಿತೆ ಪೂಜಾಳನ್ನು ಸ್ಥಳ ಮಹಜರು ನಡೆಸಲು ರೂಡಗಿ ಗ್ರಾಮಕ್ಕೆ ಕರೆತಂದ ಸಂದರ್ಭದಲ್ಲಿ ಗ್ರಾಮಸ್ಥರ ಆಕ್ರೋಶ ವ್ಯಕ್ತವಾಗಿದೆ. ಆರೋಪಿತೆಯನ್ನು ತಮ್ಮ ಕೈಗೆ ಒಪ್ಪಿಸುವಂತೆ ಕೆಲವರು ಕೂಗಾಡಿದ್ದಾರೆ. ಪ್ರೀತಿ-ಪ್ರೇಮದ ವಿಚಾರಕ್ಕೆ ಸಂಸಾರದಲ್ಲಿ ಬಿರುಕು ಮೂಡಿ, ಕೊನೆಗೆ ಗಂಡನ ಕೊಲೆಯಲ್ಲಿ ಅಂತ್ಯವಾದ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಅಮಾಯಕ ಗಣೇಶ್‌ನನ್ನು ಕಳೆದುಕೊಂಡ ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸದ್ಯ ಆರೋಪಿಗಳು ಪೊಲೀಸರ ವಶದಲ್ಲಿದ್ದು, ತನಿಖೆ ಮುಂದುವರಿದಿದೆ.
ವರದಿ: ವಿಜಯ ಕಲಾಲ,
ಪಬ್ಲಿಕ್ ನೆಕ್ಸ್ಟ ಮುದ್ದೇಬಿಹಾಳ.
PublicNext
28/10/2026 02:13 pm