ವಿಜಯಪುರ: ಕಳ್ಳತನವಾದ ಚಿನ್ನ, ಬೆಳ್ಳಿ, ವಾಹನಗಳು ಹಾಗೂ ಕಳೆದುಕೊಂಡ ಹಣ ಮತ್ತೆ ಕೈ ಸೇರುತ್ತವೆ ಎಂಬ ನಿರೀಕ್ಷೆಯನ್ನೇ ಬಿಟ್ಟಿದ್ದ ಜನರಿಗೆ ವಿಜಯಪುರ ಜಿಲ್ಲಾ ಪೊಲೀಸರು ಸಿಹಿ ಸುದ್ದಿ ನೀಡಿದ್ದಾರೆ. ಬರೋಬ್ಬರಿ 9.43 ಕೋಟಿ ರೂಪಾಯಿ ಮೌಲ್ಯದ ಕಳುವಾದ ಸ್ವತ್ತು ಹಾಗೂ ಸೈಬರ್ ವಂಚನೆಗೆ ಒಳಗಾದ ಹಣವನ್ನು ಪತ್ತೆಹಚ್ಚಿ ವಾರಸುದಾರರಿಗೆ ಮರಳಿಸಿದ್ದಾರೆ.
ಹೌದು... ವಿಜಯಪುರ ಜಿಲ್ಲಾ ಪೊಲೀಸರು ಕಳ್ಳರು ಹಾಗೂ ಸೈಬರ್ ಖದೀಮರ ಹೆಡೆಮುರಿ ಕಟ್ಟಿದ್ದಾರೆ. ವಿವಿಧ ಕಳ್ಳತನ ಪ್ರಕರಣಗಳಲ್ಲಿ ಕಳುವಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಪತ್ತೆಹಚ್ಚಿ ನಿಜವಾದ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬರೋಬ್ಬರಿ 9 ಕೋಟಿ 43 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ, ವಾಹನಗಳು ಹಾಗೂ ನಗದು ಹಣವನ್ನು ಸಂತ್ರಸ್ತರಿಗೆ ಮರಳಿಸಲಾಯಿತು. ಕಳೆದುಕೊಂಡ ಹಣ, ಒಡವೆ ಮತ್ತೆ ಕೈ ಸೇರಿದ ಖುಷಿಯಲ್ಲಿ ಸಂತ್ರಸ್ತರ ಮುಖದಲ್ಲಿ ಮಂದಹಾಸ ಮೂಡಿತ್ತು.
ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣ, ಒಡವೆ ಹಾಗೂ ವಾಹನಗಳನ್ನು ಕಳೆದುಕೊಂಡು ಕಂಗಾಲಾಗಿದ್ದವರಿಗೆ ಪೊಲೀಸರ ಈ ಕಾರ್ಯಾಚರಣೆ ಹೊಸ ಭರವಸೆ ನೀಡಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ 28 ಪೊಲೀಸ್ ಠಾಣೆಗಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. 2026ರ ಫೆಬ್ರವರಿ 11ರಿಂದ ನವೆಂಬರ್ 1ರವರೆಗೆ ದಾಖಲಾಗಿದ್ದ ಒಟ್ಟು 115 ಸ್ವತ್ತು ಕಳವು ಪ್ರಕರಣಗಳನ್ನು ಭೇದಿಸಿ, 5 ಕೋಟಿ 23 ಲಕ್ಷ 66 ಸಾವಿರದ 285 ರೂಪಾಯಿ ಮೌಲ್ಯದ ಭೌತಿಕ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇಷ್ಟೇ ಅಲ್ಲ, ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣಗಳಿಗೂ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಒಟ್ಟು 20 ಸೈಬರ್ ವಂಚನೆ ಪ್ರಕರಣಗಳನ್ನು ಪತ್ತೆಹಚ್ಚಿ, ವಂಚಕರಿಂದ 4 ಕೋಟಿ 19 ಲಕ್ಷ 68 ಸಾವಿರದ 162 ರೂಪಾಯಿ ಹಣವನ್ನು ಪತ್ತೆಹಚ್ಚಿ ಸಂತ್ರಸ್ತರಿಗೆ ಮರುಪಾವತಿಸಿದ್ದಾರೆ.
ಹೀಗೆ ಕಳವು ಹಾಗೂ ಸೈಬರ್ ವಂಚನೆ ಪ್ರಕರಣಗಳು ಸೇರಿದಂತೆ ಒಟ್ಟು 9 ಕೋಟಿ 43 ಲಕ್ಷ 34 ಸಾವಿರದ 447 ರೂಪಾಯಿ ಮೌಲ್ಯದ ಸ್ವತ್ತನ್ನು ಪತ್ತೆಹಚ್ಚುವಲ್ಲಿ ವಿಜಯಪುರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಾಮಾನ್ಯವಾಗಿ ಕಳುವಾದ ವಸ್ತುಗಳು ಮತ್ತೆ ಸಿಗುವುದು ಕಷ್ಟ ಎಂಬ ನಂಬಿಕೆ ಇದೆ. ಆದರೆ ವಿಜಯಪುರ ಜಿಲ್ಲಾ ಪೊಲೀಸರು ಕೇವಲ ಹತ್ತು ತಿಂಗಳ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಮರಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಪಬ್ಲಿಕ್ ನೆಕ್ಸ್ಟ ವಿಜಯಪುರ
PublicNext
03/11/2026 08:11 am