ಕಳಸ: ಕಸ್ತೂರಿ ರಂಗನ್ ವರದಿ ಜಾರಿಯ ಮೂಲಕ ಮಲೆನಾಡು ಹಾಗೂ ಕರಾವಳಿ ಭಾಗದ ರೈತರು ಮತ್ತು ಕಾರ್ಮಿಕರನ್ನು ಬೀದಿಪಾಲು ಮಾಡುವ ಆತಂಕ ಎದುರಾಗಿದೆ. ದೇಶದ ಆರು ರಾಜ್ಯಗಳಿಗೆ ಮಾರಕವಾಗಿರುವ ಈ ವರದಿಯು ಕರ್ನಾಟಕದ ಕಾಫಿನಾಡು ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಉಡುಪಿ ಹಾಗೂ ದಕ್ಷಿಣ ಕನ್ನಡ ಸೇರಿದಂತೆ ಒಟ್ಟು 10 ಜಿಲ್ಲೆಗಳ ಸಾವಿರಾರು ಸಣ್ಣ ರೈತ ಕುಟುಂಬಗಳ ಪಾಲಿಗೆ ಮರಣಶಾಸನವಾಗಿ ಪರಿಣಮಿಸಿದೆ. ಇದರ ನೇರ ಪರಿಣಾಮವಾಗಿ ಈ ವ್ಯಾಪ್ತಿಯ ಹತ್ತು ಕಿಲೋಮೀಟರ್ ಸುತ್ತಳತೆಯಲ್ಲಿ ಯಾವುದೇ ಸಣ್ಣಪುಟ್ಟ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾದರೂ ಕೇಂದ್ರ ಪರಿಸರ ಇಲಾಖೆಯ ಕಡ್ಡಾಯ ಅನುಮತಿ ಪಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದಾಗಿ ಗುಡ್ಡಗಾಡು ಪ್ರದೇಶದ ಜನರಿಗೆ ಅತ್ಯವಶ್ಯಕವಾಗಿರುವ ರಸ್ತೆ, ಆಸ್ಪತ್ರೆ, ವಿದ್ಯುತ್ ಹಾಗೂ ಶಾಲೆಯಂತಹ ಕನಿಷ್ಠ ಮೂಲಭೂತ ಸೌಕರ್ಯಗಳು ಕೂಡ ಸಂಪೂರ್ಣವಾಗಿ ಮರೀಚಿಕೆಯಾಗುವ ಅಪಾಯವಿದೆ.
ನೂರಾರು ವರ್ಷಗಳಿಂದ ಪ್ರಕೃತಿಯನ್ನೇ ಆರಾಧಿಸಿಕೊಂಡು, ಪರಿಸರಕ್ಕೆ ಯಾವುದೇ ಹಾನಿ ಮಾಡದೆ ಕೃಷಿ ಮಾಡಿಕೊಂಡು ಬರುತ್ತಿರುವ ಇಲ್ಲಿನ ಮೂಲ ನಿವಾಸಿಗಳ ಬದುಕನ್ನು ಕಿತ್ತುಕೊಳ್ಳುವ ಬಹುದೊಡ್ಡ ಹುನ್ನಾರ ಈ ವರದಿಯ ಹಿಂದಿದೆ ಎಂದು ಜನಜಾಗೃತಿ ಸಂಗ್ರಾಮ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಸ್ಥಳೀಯರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಹಾಗೂ ಅರಣ್ಯದಂಚಿನ ಜನರನ್ನು ಒಕ್ಕಲೆಬ್ಬಿಸುವ ಈ ಅವೈಜ್ಞಾನಿಕ ನಡೆಯ ವಿರುದ್ಧ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ರೂಪಿಸಲು ವೇದಿಕೆ ಸಿದ್ಧತೆ ನಡೆಸುತ್ತಿದೆ.
PublicNext
03/11/2026 03:20 pm
LOADING...