ಧಾರವಾಡ: ಕೆಪಿಎಸ್‌ಸಿ ನಡೆಸಿದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಕೆಇಎ ನಡೆಸಿದ ವಿಎಓ ಹಾಗೂ ಕೆಎಸ್ಆರ್‌ಪಿ ಪರೀಕ್ಷೆಯಲ್ಲೂ ಇದೀಗ ಅಕ್ರಮ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಗ್ರಾಮ ಲೆಕ್ಕಾಧಿಕಾರಿ ಹಾಗೂ ಪೊಲೀಸ್ ನೇಮಕಾತಿ ಪರೀಕ್ಷೆಯ ಓಎಂಆರ್ ಸೀಟ್‌ನಲ್ಲಿ ಉತ್ತರವನ್ನು ಮಾರ್ಕ್ ಮಾಡದೇ ಸುಮಾರು 30 ಅಭ್ಯರ್ಥಿಗಳು ಅವುಗಳನ್ನು ಖಾಲಿ ಬಿಟ್ಟಿದ್ದಾರೆ. ಹೀಗೆ ಖಾಲಿ ಬಿಟ್ಟು ಬಂದ ಓರ್ವ ಅಭ್ಯರ್ಥಿಗೆ 80ಕ್ಕೂ ಅಧಿಕ ಅಂಕಗಳು ಬಂದಿವೆ. ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆಯಲ್ಲಿ ಕೇವಲ 11 ಪ್ರಶ್ನೆಗೆ ಉತ್ತರ ಬರೆದಿದ್ದ ಅಭ್ಯರ್ಥಿ ಶಿವಾನಂದ ಪಾಟೀಲ ಎನ್ನುವವರಿಗೆ 80ಕ್ಕೂ ಅಧಿಕ ಅಂಕ ಬಂದಿವೆ. ಓಎಂಆರ್ ಶೀಟ್ ಖಾಲಿ ಬಿಡುವಂತೆ ಈ ಅಭ್ಯರ್ಥಿಗೆ ಸೂಚನೆ ಬಂದ ಹಿನ್ನೆಲೆ ಅವರು ಓಎಂಆರ್ ಶೀಟ್ ಖಾಲಿ ಬಿಟ್ಟಿರಬಹುದು ಎಂಬ ಆರೋಪ ಇದೀಗ ಕೇಳಿ ಬಂದಿದೆ. ಹೀಗಾಗಿ ಧಾರವಾಡದ ಕೆಲ ಪರೀಕ್ಷಾರ್ಥಿಗಳು ಧಾರವಾಡ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ನೌಕರಿ ಕೊಡಿಸುವುದಾಗಿ ಹೇಳಿ ಯಾರೋ ಇವರಿಂದ ಹಣ ಪಡೆದಿರಬಹುದು ಎಂದು ಆರೋಪಿಸಲಾಗಿದೆ. ಹೀಗಾಗಿಯೇ ಅಭ್ಯರ್ಥಿಗಳು ಓಎಂಆರ್ ಶೀಟ್ ಖಾಲಿ ಬಿಟ್ಟಿದ್ದಾರೆ. ಕೆಪಿಎಸ್‌ಸಿಯಂತೆಯೇ ಕೆಇಎ ನಡೆಸಿ ಪರೀಕ್ಷಾ ಅಕ್ರಮನವನ್ನು ಗಂಭೀರವಾಗಿ ಪರಿಗಣಿಸಬೇಕು ಇದರಲ್ಲೂ ದೊಡ್ಡಮಟ್ಟದ ಅಕ್ರಮ ನಡೆದಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಕೆಇಎ ಪರೀಕ್ಷೆ ನಡೆಸಿದರೂ ಪಾರದರ್ಶಕವಾಗಿ ನಡೆಸಿಲ್ಲ. ಈ ಬಗ್ಗೆ ಎಸ್ಐಟಿ ತಂಡ ರಚಿಸಿ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಪರೀಕ್ಷಾರ್ಥಿಗಳು ಆಗ್ರಹಿಸಿದ್ದಾರೆ.
ಒಟ್ಟಾರೆ ಕೆಇಎ ನಡೆಸಿದ ಪರೀಕ್ಷೆಯಲ್ಲೂ ಇದೀಗ ಅಕ್ರಮದ ವಾಸನೆ ಬಂದಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದೇ ಹೋದಲ್ಲಿ ಮತ್ತೆ ಪರೀಕ್ಷಾರ್ಥಿಗಳ ಹೋರಾಟ ಭುಗಿಲೇಳುವ ಸಾಧ್ಯತೆ ಇದೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/11/2026 06:03 pm
LOADING...