ಶಿರಹಟ್ಟಿ: ಹಾಲಿನ ದರವನ್ನು ಲೀಟರ್‌ಗೆ 8 ರೂ. ಹೆಚ್ಚಳ ಮಾಡುವುದಾಗಿ ಹೇಳಿ, ಒಟ್ಟು 12 ರೂ. ಏರಿಕೆ ಮಾಡಿರುವ ಸರ್ಕಾರ, ಅದರಲ್ಲಿ ಕೇವಲ 7 ರೂ.ಗಳನ್ನು ಮಾತ್ರ ರೈತರಿಗೆ ನೀಡುತ್ತಿದೆ. ಹಾಗಾದರೆ ಉಳಿದ 5 ರೂ. ಯಾರ ಪಾಲಾಗುತ್ತಿದೆ? ಎಂದು ಬಿಜೆಪಿ ಮುಖಂಡ ರವಿಕಾಂತ ಅಂಗಡಿ ಸರ್ಕಾರವನ್ನು ಪ್ರಶ್ನಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳದ ವಿಚಾರದಲ್ಲಿ ಸರ್ಕಾರ ರೈತರಿಗೆ ಸ್ಪಷ್ಟ ಮಾಹಿತಿ ನೀಡಬೇಕು. ರೈತರ ಹೆಸರಿನಲ್ಲಿ ದರ ಹೆಚ್ಚಳ ಮಾಡಿ, ಹೆಚ್ಚುವರಿ ಹಣದ ಹಂಚಿಕೆ ಕುರಿತು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹಾಲು ಉತ್ಪಾದಕರು ಹಗಲಿರುಳು ಶ್ರಮಿಸಿ ಹಾಲು ಪೂರೈಸುತ್ತಿದ್ದಾರೆ. ಪಶು ಆಹಾರ, ಔಷಧೋಪಚಾರ ಸೇರಿದಂತೆ ನಿರ್ವಹಣಾ ವೆಚ್ಚಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ರೈತರಿಗೆ ಸಿಗಬೇಕಾದ ಸಂಪೂರ್ಣ ಲಾಭ ತಲುಪುತ್ತಿದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಹೆಚ್ಚಳವಾದ ಹಣದ ಲೆಕ್ಕವನ್ನು ಸಾರ್ವಜನಿಕರ ಮುಂದಿಡಬೇಕು ಎಂದು ಆಗ್ರಹಿಸಿದರು.
ರೈತರ ಹಿತದ ಹೆಸರಿನಲ್ಲಿ ದರ ಏರಿಕೆ ಮಾಡುವ ಸರ್ಕಾರ, ರೈತರಿಗೆ ಸಿಗುವ ಹಣದ ವಿಚಾರದಲ್ಲೂ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ರವಿಕಾಂತ ಅಂಗಡಿ ಒತ್ತಾಯಿಸಿದರು.
Kshetra Samachara
03/11/2026 07:37 pm
LOADING...