ತುಮಕೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಹಾಲಿನ ದರ ಏರಿಕೆ ಮಾಡಿರುವುದನ್ನು ಖಂಡಿಸಿ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ನಗರದ ಬಿಜಿಎಸ್ ವೃತ್ತದಲ್ಲಿ ಹಾಲಿನ ಖಾಲಿ ಕ್ಯಾನ್ ಹೊತ್ತು ಪ್ರತಿಭಟನೆ ನಡೆಸಿದರು. ಏರಿಸಿರುವ ಹಾಲಿನ ದರ ವಾಪಸ್ ಪಡೆಯುವಂತೆ ಒತ್ತಾಯಿಸಿದರು.
ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಿಳಾ ಕಾರ್ಯಕರ್ತೆಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಾಲಿನ ದರ ಏರಿಕೆಯಿಂದ ಸಾಮಾನ್ಯ ಕುಟುಂಬಗಳು, ಅದರಲ್ಲೂ ಮಕ್ಕಳಿಗೆ ಹಾಲು ನೀಡುವ ತಾಯಂದಿರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಕಿಡಿಕಾರಿದರು.
ಈ ವೇಳೆ ಮಾತನಾಡಿದ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಚೈತ್ರ ಮಂಜುನಾಥ್, ರಾಜ್ಯದ ಕಾಂಗ್ರೆಸ್ ಸರ್ಕಾರ 2023 ರಿಂದ ನಾಲ್ಕು ಬಾರಿ ಹಾಲಿನ ದರ ಹೆಚ್ಚಳ ಮಾಡಿದೆ. ಇದರಿಂದ ಜನಸಾಮಾನ್ಯರ ಕುಟುಂಬದ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ. ಮಕ್ಕಳಿಗೆ ನಿತ್ಯ ನೀಡುವ ಹಾಲಿನ ದರವೂ ಹೆಚ್ಚಳವಾಗಿರುವುದರಿಂದ ತಾಯಂದಿರಾಗಿ ನಾವು ಬೀದಿಗಿಳಿದು ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ಹಾಲು ಉತ್ಪಾದಕರಿಗೆ ನೀಡಬೇಕಾಗಿರುವ ಬಾಕಿ ಪ್ರೋತ್ಸಾಹಧನ ನೀಡದ ಸರ್ಕಾರ ಹಾಲಿನ ಬೆಲೆ ಹೆಚ್ಚಳ ಮಾಡಿ ರೈತರ ಕಣ್ಣೊರೆಸುವ ತಂತ್ರ ಮಾಡಿ ಸಾಮಾನ್ಯಜನರನ್ನು ಕಷ್ಟಕ್ಕಿ ಸಿಲುಕಿಸಿದೆ. ಸರ್ಕಾರ ತನ್ನ ಬೊಕ್ಕಸದಿಂದಲೇ ಪ್ರೋತ್ಸಾಹಧನ ನೀಡಬೇಕು ಗ್ರಾಹಕರಿಗೆ ಹೇರಬಾರದು. ಉಚಿತ ಯೋಜನೆಗಳನ್ನು ಜಾರಿಗೊಳಿಸುವ ಹೆಸರಿನಲ್ಲಿ ಜನರ ಜೇಬಿಗೆ ಕತ್ತರಿ ಹಾಕುವುದು ಎಷ್ಟು ಸಮಂಜಸ ಎಂದು ಚೈತ್ರ ಮಂಜುನಾಥ್ ಪ್ರಶ್ನಿಸಿದರು.
ಸರ್ಕಾರ ಕೂಡಲೇ ಹಾಲಿನ ದರ ಏರಿಕೆ ನಿರ್ಧಾರವನ್ನು ಹಿಂಪಡೆದು, ಹೆಚ್ಚಿಸಿರುವ ದರವನ್ನು ತಕ್ಷಣ ಇಳಿಸಬೇಕು. ಜನಸಾಮಾನ್ಯರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಮಹಿಳಾ ಮೋರ್ಚಾ ವತಿಯಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಭೈರಣ್ಣ, ಕಾರ್ಯದರ್ಶಿ ಕೆ. ವೇದಮೂರ್ತಿ, ಖಜಾಂಚಿ ಗಣೇಶ್‌ಪ್ರಸಾದ್, ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ಬಿ.ಹೆಚ್. ವಸಂತ, ನಗರ ಅಧ್ಯಕ್ಷ ಧನುಷ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಮಂಗಲ ಜಗದೀಶ್, ಮುಖಂಡರಾದ ಬನಶಂಕರಿ ಬಾಬು, ಹನುಮಂತರಾಜು, ಬಂಬೂ ಮೋಹನ್, ಪುಷ್ಪ ಪಾಲಾಕ್ಷಯ್ಯ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Kshetra Samachara
04/11/2026 03:30 pm