ಬೆಳಗಾವಿ: ಸವದತ್ತಿ ತಾಲೂಕಿನ ಉಗರಗೋಳ ಸಮೀಪದ ಪ್ರಸಿದ್ಧ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿಗಳ ಕಾಣಿಕೆ ಎಣಿಕೆ ಕಾರ್ಯ ಬುಧವಾರ ಮುಕ್ತಾಯಗೊಂಡಿದ್ದು, ಒಟ್ಟು ₹2.69 ಕೋಟಿ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ.
ನಾಲ್ಕು ದಿನಗಳ ಕಾಲ ನಡೆದ ಎಣಿಕೆ ಕಾರ್ಯದಲ್ಲಿ ₹2.34 ಕೋಟಿ ನಗದು, ₹26.95 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹7.32 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳು ದೊರೆತಿವೆ.
ಇನ್ನು ದೇವಿಯ ಹುಂಡಿಯಲ್ಲಿ ಭಕ್ತರು ಹಣ, ಚಿನ್ನಾಭರಣಗಳ ಜತೆಗೆ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿ ಬರೆದ ವಿವಿಧ ಪತ್ರಗಳೂ ಪತ್ತೆಯಾಗಿವೆ. ಈ ಪೈಕಿ ಭಕ್ತನೊಬ್ಬ ಬರೆದ ವಿಚಿತ್ರ ಬೇಡಿಕೆಯ ಪತ್ರ ಎಲ್ಲರ ಗಮನ ಸೆಳೆದಿದೆ.
'ಅಮ್ಮ, ನಮ್ಮ ಮನೆಯಲ್ಲಿ ತಿಗಣೆಗಳಿವೆ. ಎಲ್ಲ ತಿಗಣೆಗಳು ಮನೆಯಿಂದ ಹೋಗಲಿ. ನಿನ್ನ ಗುಡಿಗೆ ಬಂದು ಹಣ್ಣು-ಕಾಯಿ ಮಾಡಿಸುವೆ' ಎಂದು ಭಕ್ತನೊಬ್ಬ ಪತ್ರ ಬರೆದು ಹುಂಡಿಯಲ್ಲಿ ಹಾಕಿದ್ದಾನೆ. ತಿಗಣೆಗಳ ಕಾಟದಿಂದ ಮುಕ್ತಿ ಕೊಡಿಸುವಂತೆ ದೇವಿಯ ಮೊರೆ ಹೋಗಿರುವ ಭಕ್ತನ ಈ ಬೇಡಿಕೆ ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ಮೇ 7ರಿಂದ ಅಕ್ಟೋಬರ್ 10ರವರೆಗೆ ಭಕ್ತರು ಹುಂಡಿಯಲ್ಲಿ ಹಾಕಿದ್ದ ಕಾಣಿಕೆಗಳ ಎಣಿಕೆ ಕಾರ್ಯ ನಡೆಯುತ್ತಿದೆ. ಒಟ್ಟು 139 ಚೀಲಗಳ ಪೈಕಿ 54 ಚೀಲಗಳಲ್ಲಿನ ಕಾಣಿಕೆ ಎಣಿಕೆ ಪೂರ್ಣಗೊಂಡಿದ್ದು, ಇನ್ನೂ 85 ಚೀಲಗಳ ಎಣಿಕೆ ಬಾಕಿ ಇದೆ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.
PublicNext
05/11/2026 12:31 pm
LOADING...