ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಧುವನ್ನೇ ಗಾಳಿಗೆ ಹೊತ್ತೊಯ್ದ ಬಲೂನ್.. ಕ್ಷಣಾರ್ಧದಲ್ಲಿ ರಕ್ಷಿಸಿದ ಫೋಟೋಗ್ರಾಫರ್, ವಿಡಿಯೋ ವೈರಲ್

ಇಸ್ತಾನ್‌ಬುಲ್ (ಟರ್ಕಿ) : ಮದುವೆಯ ಕ್ಷಣಗಳನ್ನು ಜೀವಮಾನವಿಡೀ ಸ್ಮರಣೀಯವಾಗಿಸಲು ವಿಭಿನ್ನ ಹಾಗೂ ಸಾಹಸಮಯ ಫೋಟೊಶೂಟ್‌ಗಳಿಗೆ ಕೈಹಾಕುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ, ಕೆಲವೊಮ್ಮೆ ಇಂತಹ ಕ್ರಿಯೇಟಿವ್ ಐಡಿಯಾಗಳು ಎಡವಟ್ಟಾಗಿ ಅಪಾಯಕ್ಕೆ ನಾಂದಿ ಹಾಡುತ್ತವೆ. ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ ಪ್ರಿ-ವೆಡ್ಡಿಂಗ್ ಫೋಟೊಶೂಟ್‌ವೊಂದರಲ್ಲಿ ಇಂತಹದ್ದೇ ರೋಮಾಂಚಕ ಹಾಗೂ ಅಷ್ಟೇ ಭಯಾನಕ ಘಟನೆ ನಡೆದಿದೆ. ಬೃಹತ್ ಬಲೂನ್‌ಗಳ ಗೊಂಚಲನ್ನು ಹಿಡಿದು ನಿಂತಿದ್ದ ವಧುವನ್ನೇ ಭಾರಿ ಗಾಳಿ ಮೇಲಕ್ಕೆತ್ತಿಕೊಂಡು ಹೋದ ಆಘಾತಕಾರಿ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಇಸ್ತಾನ್‌ಬುಲ್‌ನ ಪ್ರಸಿದ್ಧ ಬಾಸ್ಫರಸ್ ಜಲಸಂಧಿಯ ಸಮುದ್ರ ತೀರದಲ್ಲಿ ಸುಂದರ ಲೆಹೆಂಗಾ ಧರಿಸಿದ್ದ ಯುವತಿಯೊಬ್ಬಳು ತನ್ನ ಮದುವೆಯ ಫೋಟೊಶೂಟ್‌ಗಾಗಿ ಸಜ್ಜಾಗಿದ್ದಳು. ಫೋಟೊಗಳಿಗೆ ವಿಶೇಷ ಆಕರ್ಷಣೆ ತರಲು ತಿಳಿ ಕಂದು ಬಣ್ಣದ ದೈತ್ಯ ಬಲೂನ್‌ಗಳ ಗೊಂಚಲನ್ನು ಆಕೆಯ ಕೈಗಿಡಲಾಗಿತ್ತು. ಆದರೆ ಸಮುದ್ರದ ಬಳಿ ಇದ್ದಕ್ಕಿದ್ದಂತೆ ಬಿರುಗಾಳಿ ಬೀಸಲು ಆರಂಭಿಸಿದೆ. ಬಲವಾದ ಗಾಳಿಯ ರಭಸಕ್ಕೆ ಗಾಳಿಪಟದಂತೆ ಬಲೂನ್‌ಗಳು ಮೇಲಕ್ಕೆ ಜಗ್ಗಿದಾಗ, ಕೈಯಲ್ಲಿದ್ದ ದಾರವನ್ನು ಬಿಡದ ವಧು ಸಮತೋಲನ ಕಳೆದುಕೊಂಡು ಗಾಳಿಯಲ್ಲೇ ತೇಲಲು ಆರಂಭಿಸಿದ್ದಾಳೆ.

ಈ ವೇಳೆ ಫೋಟೊಗ್ರಾಫರ್ ಸಮಯಪ್ರಜ್ಞೆ ತೋರಿ ಕೈಯಲ್ಲಿದ್ದ ದುಬಾರಿ ಕ್ಯಾಮರಾವನ್ನು ಪಕ್ಕಕ್ಕಿಟ್ಟು ಕ್ಷಣಾರ್ಧದಲ್ಲಿ ಆಕೆಯತ್ತ ಧಾವಿಸಿದ್ದಾನೆ. ಆಕೆಯನ್ನು ಗಟ್ಟಿಯಾಗಿ ಹಿಡಿದು ಕೆಳಗೆ ನಿಲ್ಲಿಸುವ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸಿದ್ದಾನೆ. ಅದೃಷ್ಟವಶಾತ್ ವಧುವಿಗೆ ಯಾವುದೇ ಸಣ್ಣಪುಟ್ಟ ಗಾಯಗಳಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಘಟನೆಯ ವಿಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದಂತೆ ಲಕ್ಷಾಂತರ ವೀಕ್ಷಣೆ ಪಡೆದಿದೆ. ನೆಟ್ಟಿಗರು ಈ ವಿಡಿಯೊ ನೋಡಿ ಬೆರಗಾಗಿದ್ದು, ತಮಾಷೆಯ ಕಾಮೆಂಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Edited By : Nirmala Aralikatti
PublicNext

PublicNext

05/11/2026 12:59 pm

Cinque Terre

2.54 K

Cinque Terre

0

ಸಂಬಂಧಿತ ಸುದ್ದಿ