ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷ (AAP) ನಡುವಿನ ರಾಜಕೀಯ ಸಮರ ಇದೀಗ ತೀರಾ ವೈಯಕ್ತಿಕ ಕೆಸರೆರಚಾಟದ ಹಂತ ತಲುಪಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೀಡಿರುವ ‘ಹಗಲುಕುಡುಕ’ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಇದಕ್ಕೆ ಎಎಪಿ ತೀಕ್ಷ್ಣ ತಿರುಗೇಟು ನೀಡಿದೆ.
ಸಂಗ್ರೂರ್‌ನಲ್ಲಿ ನಡೆದ ಕಾಂಗ್ರೆಸ್‌ನ ‘ಇನ್ಸಾಫ್ ರ್ಯಾಲಿ’ಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪಂಜಾಬ್‌ನ ಡ್ರಗ್ಸ್ ಸಮಸ್ಯೆಯನ್ನು ಪ್ರಸ್ತಾಪಿಸುತ್ತಾ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಸಂಸತ್ತಿನ ಹಳೆಯ ದಿನಗಳನ್ನು ನೆನಪಿಸಿಕೊಂಡ ರಾಹುಲ್, "ಹಿಂದೆ ಭಗವಂತ್ ಮಾನ್ ಲೋಕಸಭೆಯಲ್ಲಿ ನಮ್ಮ ಜತೆಯೇ ಕುಳಿತು ತಮಾಷೆಯಾಗಿ ಹರಟೆ ಹೊಡೆಯುತ್ತಿದ್ದರು. ಆಗ ಬೆಳಗ್ಗೆ 11 ಗಂಟೆಯಷ್ಟೇ ಆಗಿರುತ್ತಿತ್ತು, ಆದರೂ ಅವರ ಬಾಯಿಂದ ಮದ್ಯದ ವಾಸನೆ ಬರುತ್ತಿತ್ತು. ಕುಡಿಯುವುದು ಅವರ ವೈಯಕ್ತಿಕ ವಿಚಾರವಾಗಿರಬಹುದು ಆದರೆ ಹೀಗೆ ದಿನಬೆಳಗಾದರೆ ನಶೆಯಲ್ಲಿ ತೇಲಾಡುವ ವ್ಯಕ್ತಿಯಿಂದ ಪಂಜಾಬ್‌ನಲ್ಲಿ ಮಾರಕವಾಗಿ ಕಾಡುತ್ತಿರುವ ಮಾದಕವಸ್ತು (ಡ್ರಗ್ಸ್) ಪಿಡುಗನ್ನು ನಿಯಂತ್ರಿಸಲು ಸಾಧ್ಯವೇ?" ಎಂದು ಪ್ರಶ್ನಿಸಿದ್ದರು. ಅಲ್ಲದೆ, ಆಪ್ ಸರ್ಕಾರ ಡ್ರಗ್ಸ್ ಮುಕ್ತ ಪಂಜಾಬ್ ನಿರ್ಮಿಸುವ ಭರವಸೆಯನ್ನು ಮಣ್ಣುಪಾಲು ಮಾಡಿದೆ ಎಂದು ಕಿಡಿಕಾರಿದ್ದರು.
ರಾಹುಲ್ ಗಾಂಧಿ ಅವರ ಈ ಹೇಳಿಕೆಗೆ ಆಮ್ ಆದ್ಮಿ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಎಎಪಿಯ ದೆಹಲಿ ಘಟಕದ ಅಧ್ಯಕ್ಷ ಸೌರಭ್ ಭಾರದ್ವಾಜ್ ಮಾಧ್ಯಮಗಳೊಂದಿಗೆ ಮಾತನಾಡಿ, "ರಾಹುಲ್ ಗಾಂಧಿ ಅವರ ಮೇಲೂ ಡ್ರಗ್ಸ್ ಸೇವನೆಯ ಹತ್ತಾರು ಆರೋಪಗಳಿವೆ. ಆದರೆ, ಕೇವಲ ಆರೋಪ ಮಾಡುವುದರಿಂದ ಏನನ್ನೂ ಸಾಧಿಸಲು ಆಗುವುದಿಲ್ಲ. ರಾಹುಲ್ ಗಾಂಧಿ ಅವರಂತಹ ಹಿರಿಯ ನಾಯಕರು ಇಷ್ಟು ಕೀಳುಮಟ್ಟದ, ಬೆಲ್ಟ್ ಕೆಳಗಿನ (below-the-belt) ಹೇಳಿಕೆಗಳನ್ನು ನೀಡುವುದು ಅವರ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ" ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಪಕ್ಷದ ಧೋರಣೆಯನ್ನು ಪ್ರಶ್ನಿಸಿದ ಸೌರಭ್ ಭಾರದ್ವಾಜ್, "ವಿರೋಧ ಪಕ್ಷದ ಮುಖ್ಯಮಂತ್ರಿಯೊಬ್ಬರು ಆಡಳಿತ ನಡೆಸುತ್ತಿದ್ದಾರೆ ಎಂಬ ಕಾರಣಕ್ಕೆ ಪಂಜಾಬ್ ರಾಜ್ಯವನ್ನು ಮಾತ್ರ ಗುರಿಯಾಗಿಸಿಕೊಂಡು ರಾಹುಲ್ ಗಾಂಧಿ ಇಂತಹ ಕೀಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಥವಾ ಉತ್ತರಾಖಂಡದ ಪುಷ್ಕರ್ ಸಿಂಗ್ ಧಾಮಿ ವಿರುದ್ಧ ಇದೇ ರೀತಿಯ ಹೇಳಿಕೆಗಳನ್ನು ನೀಡುವ ಧೈರ್ಯ ರಾಹುಲ್ ಗಾಂಧಿಗೆ ಇದೆಯೇ?" ಎಂದು ನೇರ ಸವಾಲು ಹಾಕಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಪಂಜಾಬ್ ಅನ್ನು ಜಂಟಿಯಾಗಿ ಗುರಿಮಾಡಿಕೊಂಡು ಷಡ್ಯಂತ್ರ ರೂಪಿಸುತ್ತಿವೆ ಎಂದು ಎಎಪಿ ನಾಯಕರು ಆರೋಪಿಸಿದ್ದಾರೆ.
PublicNext
05/11/2026 03:47 pm