ಧಾರವಾಡ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಗರ್ಭಿಣಿ ಮಾಡಿದ್ದ ಅಪರಾಧಿಗೆ ಧಾರವಾಡದ ಎರಡನೇ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು 25 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಮಾರುತಿ ನಾಗರಳ್ಳಿ ಎಂಬಾತ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ ಆಕೆಯೊಂದಿಗೆ ಸಲುಗೆ ಬೆಳೆಸಿದ್ದ. ಆಕೆಯನ್ನು ಪುಸಲಾಯಿಸಿ ಆಕೆಯೊಂದಿಗೆ ನಾಲ್ಕೈದು ಬಾರಿ ದೈಹಿಕ ಸಂಪರ್ಕ ಹೊಂದಿದ್ದ. ಇದರಿಂದ ಆ ಬಾಲಕಿ ಐದು ತಿಂಗಳು ಗರ್ಭಿಣಿಯಾಗಿದ್ದಳು. 2022ರಲ್ಲೇ ಈ ಘಟನೆ ನಡೆದಿತ್ತು. ಆಗಲೇ ಬಾಲಕಿಯ ತಾಯಿ ಮಾರುತಿ ಎಂಬಾತನ ಮೇಲೆ ಹುಬ್ಬಳ್ಳಿಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಮಾರುತಿ ಎಂಬ ಅಪರಾಧಿ ಆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ ಇದನ್ನು ಮನೆಯಲ್ಲಿ ಹೇಳಿದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನು ಸಹ ಆ ಬಾಲಕಿಗೆ ಹಾಕಿದ್ದ. ಇದರಿಂದ ಭಯಬಿದ್ದ ಬಾಲಕಿ ಮನೆಯಲ್ಲಿ ಯಾವುದೇ ವಿಷಯ ಹೇಳಿರಲಿಲ್ಲ. ಆ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋದಾಗಲೇ ಆ ಬಾಲಕಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಆನಂತರ ಆ ಬಾಲಕಿ ತಾಯಿ ದೂರು ನೀಡಿದಾಗ ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಮಾರುತಿ ಅಪರಾಧಿ ಎಂದು ಪರಿಗಣಿಸಿ ಪೊಕ್ಸೊ ಹಾಗೂ ಅತ್ಯಾಚಾರ ಪ್ರಕರಣಗಳಡಿ 25 ವರ್ಷ ಜೈಲು ಶಿಕ್ಷೆಯ ಜೊತೆಗೆ 5 ಸಾವಿರ ದಂಡ ವಿಧಿಸಿದೆ. ಸರ್ಕಾರದ ಪರವಾಗಿ ಶೈಲಾ ಅಂಗಡಿ ಅವರು ವಕಾಲತ್ತು ವಹಿಸಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/06/2025 10:41 pm