ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ತನಗೆ ಬೇಕಾದಂತೆ ಬೆಂಗಳೂರನ್ನು ವಿಭಜನೆ ಮಾಡಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರನ್ನು ಅತಂತ್ರವಾಗಿ ಐದು ಭಾಗ ಮಾಡಲಾಗಿದೆ. ರಾಜಕೀಯ ದೃಷ್ಟಿಯಿಂದ ಹಾಗೂ ಕಾಂಗ್ರೆಸ್ ಗೆಲ್ಲಬೇಕೆಂಬ ಗುರಿಯಿಂದ ವಿಭಜನೆ ಮಾಡಲಾಗಿದೆ. ಐದು ಪಾಲಿಕೆಗಳ ನಡುವೆ ತಾರತಮ್ಯ ಉಂಟಾಗಲಿದೆ. ಇದರ ವಿರುದ್ಧ ಕೋರ್ಟ್ ಮೊರೆ ಹೋಗಿ ಹೋರಾಟ ಮಾಡಲಾಗುವುದು.
ಬೆಂಗಳೂರನ್ನು ಒಡೆಯಿರಿ ಎಂದು ಜನರು ಕೇಳಿಲ್ಲ. ಈಗಾಗಲೇ ನಗರದಲ್ಲಿ ತೆರಿಗೆ, ಸೆಸ್, ಇ ಖಾತಾದಿಂದ ಸಮಸ್ಯೆ ಉಂಟುಮಾಡಿದ್ದಾರೆ. ಇಂತಹ ಸಮಯದಲ್ಲಿ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು ಖಚಿತವಾಗಿದೆ. ಅದನ್ನು ತಪ್ಪಿಸಲು ಹೀಗೆ ಭಾಗ ಮಾಡಿದ್ದಾರೆ ಎಂದರು.
ಕಪ್ಪು ಪಟ್ಟಿಯಲ್ಲಿರುವ ಗುತ್ತಿಗೆದಾರರಿಗೆ ಸುರಂಗ ರಸ್ತೆ ಯೋಜನೆಯನ್ನು ನೀಡಲಾಗುತ್ತಿದೆ. ಸುರಂಗ ರಸ್ತೆಗೆ ಟೋಲ್ ಕೂಡ ಇರುವುದರಿಂದ ಶ್ರೀಮಂತರು ಮಾತ್ರ ಇದನ್ನು ಬಳಸಬಹುದು. ಜನಸಾಮಾನ್ಯರಿಗೆ ಇದರಿಂದ ಪ್ರಯೋಜನವಿಲ್ಲ. ಅಭಿವೃದ್ಧಿಗೆ ನಮ್ಮ ಸಹಕಾರವಿದೆ. ಆದರೆ ದುಡ್ಡು ಕೊಳ್ಳೆ ಹೊಡೆಯುವ ಯೋಜನೆಗಳನ್ನು ವಿರೋಧಿಸುತ್ತೇವೆ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಭೂಕಂಪದ ನಾಡು ಮಾಡಬಾರದು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.
PublicNext
26/07/2025 08:17 pm