ಮೂಡುಬಿದಿರೆ: ಇರುವೈಲು ಗ್ರಾಮದ ನಿವಾಸಿ, ಇರುವೈಲು ಮೇಳದ ಹಿರಿಯ ಹಾಸ್ಯ ಕಲಾವಿದ ಅನಂತ ಪ್ರಭು (83) ಗುರುವಾರ ರಾತ್ರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಯಕ್ಷಗಾನದಲ್ಲಿ ಹಾಸ್ಯಗಾರರಿಗೆ ಸ್ಟಾರ್ ವ್ಯಾಲ್ಯೂ ಇಲ್ಲದಂತಹ ಕಾಲದಲ್ಲಿ ರಂಗಸ್ಥಳದಲ್ಲಿ ಹಾಸ್ಯಗಾರನಾಗಿ ಪ್ರೇಕ್ಷಕರನ್ನು ರಂಜಿಸಿದ ಆನಂತ ಪ್ರಭು ಕಟ್ಟಣಿಗೆಯವರು ಇರುವೈಲು ಮೇಳದ ಪ್ರಮುಖ ಹಾಸ್ಯ ಕಲಾವಿದರಾಗಿದ್ದರು. ಇವರು ಪತ್ನಿ ಮೂವರು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ
ಅನಂತಪ್ರಭು ತಮ್ಮ ಹನ್ನೆರಡನೇ ವಯಸ್ಸಿನಲ್ಲಿ ಯಕ್ಷಗಾನದ ರಂಗಸ್ಥಳ ಪ್ರವೇಶಿಸಿದರು. ಕಟೀಲು ಮೇಳವನ್ನು ಮುನ್ನಡೆಸುತ್ತಿದ್ದ ದಿ. ಅಣ್ಣಪ್ಪ ಸಾಮಂತರಿಂದಾಗಿ ಯಕ್ಷಗಾನದ ಒಲವು ಬೆಳೆಸಿಕೊಂಡಿದ್ದರು. ಇರುವೈಲು ವಾಸುದೇವ ಆಚಾರಿಯವರಲ್ಲಿ ಹೆಜ್ಜೆಗಾರಿಕೆಯನ್ನು ಕಲಿತು, ಸಂಜೀವ ಪ್ರಭು ಕಟ್ಟಣಿಗೆಯವರ ಮಾರ್ಗದರ್ಶನದಲ್ಲಿ, ಇರುವೈಲು ಶ್ರೀ ರಾಮ ಅಸ್ರಣ್ಣ ಮತ್ತು ಜನಾರ್ಧನ ಆಚಾರಿ ಕಲ್ಲಮರಾಯಿ ನೇತೃತ್ವದಲ್ಲಿ ಪುನರ್ ಸಂಘಟಿತವಾದ ಇರುವೈಲು ಮೇಳದಲ್ಲಿ ಯಶಸ್ವೀ ಹಾಸ್ಯ ಕಲಾವಿದರಾಗಿ ಯಕ್ಷಗಾನ ರಂಗದಲ್ಲಿ ಮಿಂಚಿದರು. ನಾಟಕ ಕಲಾವಿದರಾಗಿ ತುಳು ನಾಟಕಗಳಲ್ಲಿ ಹಾಸ್ಯದಿಂದ ಪ್ರೇಕ್ಷಕರ ರಂಜಿಸಿದರು. ಅತಿಥಿ ಕಲಾವಿದರಾಗಿ ಜಿಲ್ಲೆಯಾದ್ಯಂತ ಸಂಚರಿಸಿ ಯಕ್ಷಗಾನದಲ್ಲಿಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಆರೋಗ್ಯ ಸಂಬಂಧಿ ಸಮಸ್ಯೆಯಿಂದಾಗಿ ಕಳೆದ 18 ವರ್ಷಗಳಿಂದ ಯಕ್ಷಗಾನದಿಂದ ದೂರ ಉಳಿದರೂ, ಯಕ್ಷಗಾನದತ್ತ ಸದಾ ತುಡಿತವನ್ನಿರಿಸಿಕೊಂಡಿದ್ದರು. ಅವರ ಕಲಾ ಸೇವೆಗೆ ಹಲವು ಪ್ರಶಸ್ತಿ, ಸನ್ಮಾನಗಳು ಸಂದಿವೆ.
Kshetra Samachara
05/09/2025 05:13 pm