ಕಾಪು: ಕರ್ನಾಟಕ ಜಾನಪದ ಪರಿಷತ್ ಯುಎಇ ಘಟಕ ದುಬಾಯಿ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಜಾನಪದ ಉತ್ಸವದಲ್ಲಿ ಕಾಪುವಿನ ನಿತ್ಯಶ್ರೀ ಜಾನಪದ ಕಲಾತಂಡ ಪಾಲ್ಗೊಳ್ಳಲಿದೆ ಎಂದು ತಂಡದ ಸಂಚಾಲಕ ಗುರುಚರಣ್ ತಿಳಿಸಿದರು.
ಕಾಪು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 7 ರಂದು ಜಾನಪದ ಉತ್ಸವ ನಡೆಯಲಿದ್ದು ಕಾಪು ಮತ್ತು ಪಡುಬಿದ್ರಿ ಪರಿಸರದ 10 ಮಂದಿ ಜನಪದ ಕಲಾವಿದರನ್ನೊಳಗೊಂಡ ತಂಡವು ತುಳುನಾಡಿನ ಕಂಗೀಲು ಮತ್ತು ಹುಲಿವೇಷ ಪ್ರದರ್ಶನ ನೀಡಲಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ, ಕರ್ನಾಟಕ ಜಾನಪದ ಪರಿಷತ್ ನ ಸಹಕಾರದೊಂದಿಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯದ ಹತ್ತಕ್ಕೂ ಅಧಿಕ ತಂಡಗಳು ವೈವಿಧ್ಯಮಯ ಜಾನಪದ ಪ್ರದರ್ಶನ, ಗಾಯನ ವಿಚಾರ ಮಂಥನ ಸಹಿತವಾಗಿ ಜಾನಪದ ಉತ್ಸವ ನಡೆಯಲಿದೆ ಎಂದರು.
ರಾಜ್ಯದ ಹತ್ತು ತಂಡಗಳು ಭಾಗವಹಿಸುವ ಕಾರ್ಯಕ್ರಮದಲ್ಲಿ ನಿತ್ಯಶ್ರೀ ಕಲಾವಿದರ ತಂಡವು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದೆ ಎಂದರು.
ತಂಡವನ್ನು ಅಭಿನಂದಿಸಿದ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಕಲಾವಿದರ ತಂಡ ಅಂತಾರಾಷ್ಟ್ರೀಯ ಮಟ್ಟದ ಜಾನಪದ ಉತ್ಸವದಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯವಾಗಿದೆ. ಕಾಂತಾರ ನಟ ಮತ್ತು ಸಂಘಟಕ ಬಾಸುಮ ಕೊಡಗು ನಿತ್ಯಶ್ರೀ ತಂಡಕ್ಕೆ ಪಾಲ್ಗೊಳ್ಳುವ ಅವಕಾಶ ಮಾಡಿಕೊಟ್ಟಿದ್ದು ಇದು ಕಾಪುವಿಗೆ ದೊಡ್ಡ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಈ ಸಂದರ್ಭ ಅನಿವಾಸಿ ಭಾರತೀಯ ಉದ್ಯಮಿ ಅಬೂಬಕ್ಕರ್ , ಪ್ರೋತ್ಸಾಹಕಿ ಪುಷ್ಪಾ ಶಂಕರ್, ನಿರ್ದೇಶಕ ಶಶಾಂಕ್ ಸಾಲ್ಯಾನ್ ಉಪಸ್ಥಿತರಿದ್ದರು.
Kshetra Samachara
07/09/2025 07:34 am