ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಸ್ಮಶಾನಕ್ಕೆ ಜಾಗ ಯಾವುದಯ್ಯಾ?- ಶವ ಸಂಸ್ಕಾರಕ್ಕೆ ಬೀರಂಬಳ್ಳಿ ಗ್ರಾಮಸ್ಥರ ಪರದಾಟ!

ಮೈಸೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷ ಕಳೆಯುತ್ತಾ ಬಂದಿದ್ದರೂ ಶವ ಸಂಸ್ಕಾರಕ್ಕಾಗಿ ಸ್ಮಶಾನ ಇಲ್ಲದೆ ಗ್ರಾಮಸ್ಥರು ಶವವಿಟ್ಟು ಪರದಾಡಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲ್ಲೂಕಿನ ಬೀರಂಬಳ್ಳಿ ಗ್ರಾಮದಲ್ಲಿ ನಡೆದಿದೆ.

ಎನ್. ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರಂಬಳ್ಳಿ ಗ್ರಾಮದಲ್ಲಿ ಸುಮಾರು 1200 ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಆದರೆ, ಶವ ಸಂಸ್ಕಾರಕ್ಕೆ ಸ್ಮಶಾನ ಭೂಮಿ ಇಲ್ಲದೆ ಅಂತ್ಯಕ್ರಿಯೆಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

2022 ರಲ್ಲಿ ಹೆಚ್.ಡಿ. ಕೋಟೆ ಕಂದಾಯ ಇಲಾಖೆ ಬೀರಂಬಳ್ಳಿ ಗ್ರಾಮದ ಸರ್ವೆ ನಂಬರ್ 50 ರಲ್ಲಿ ಒಂದು ಎಕರೆ ಜಾಗವನ್ನು ಸ್ಮಶಾನಕ್ಕೆ ನೀಡಲಾಗಿದೆ. ಆದರೆ, ಸ್ಮಶಾನದ ಸ್ಥಳ ಯಾವುದು ಎಂಬುದೇ ತಿಳಿದಿಲ್ಲ. ಕಬಿನಿ ಜಲಾಶಯ ಭರ್ತಿಯಾದರೆ ಶವ ಸಂಸ್ಕಾರಕ್ಕೆ ಹರಸಾಹಸ ಪಡಬೇಕಾಗಿದೆ.

ಇಂದು ಗ್ರಾಮದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅಂತ್ಯಕ್ರಿಯೆ ಮಾಡಲು ಸ್ಮಶಾನ ಇಲ್ಲದೆ ಶವವನ್ನು ಇಟ್ಟು ಸ್ಥಳ ಹುಡುಕುತ್ತಿರುವ ದೃಶ್ಯ ಮನಕಲಕುವಂತಿತ್ತು.

ರೊಚ್ಚಿಗೆದ್ದ ಗ್ರಾಮಸ್ಥರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿದು ಸ್ಥಳಕ್ಕೆ ರಾಜಸ್ವ ನಿರೀಕ್ಷಕ ಯೋಗೇಶ್ ಭೇಟಿ ನೀಡಿದರು.

ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಕೂಡಲೇ ತಾಲ್ಲೂಕು ಆಡಳಿತ ಶಾಶ್ವತ ಸ್ಮಶಾನ ಭೂಮಿ ನೀಡುವಂತೆ ಒತ್ತಾಯಿಸಿದರು. ಎಚ್ಚೆತ್ತ ಅಧಿಕಾರಿಗಳು ತಾತ್ಕಾಲಿಕವಾಗಿ ಜಾಗ ಗುರುತಿಸಿ ಶವ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಏನೇ ಆಗಲಿ, ಪಾಯಸ ಕುಡಿಯುವಾಗ ಮೀಸೆ ಮೇಲೆ ಜ್ಞಾನ ಆಯ್ತಂತೆ ಅನ್ನೋ ಗಾದೆಯಂತೆ ಯಾರಾದರೂ ಮೃತಪಟ್ಟಾಗ ಶವಸಂಸ್ಕಾರಕ್ಕೆ ಸ್ಮಶಾನದ ಜಾಗ ಅಧಿಕಾರಿಗಳಿಗೆ ನೆನಪು ಆಗಿದೆಯಂತೆ.

ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಶಾಶ್ವತವಾಗಿ ಸ್ಮಶಾನ ಭೂಮಿಯನ್ನು ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

-ಸಿಎಂ ಸುಗಂಧರಾಜು, ಪಬ್ಲಿಕ್ ನೆಕ್ಸ್ಟ್, ಮೈಸೂರು

Edited By :
PublicNext

PublicNext

07/09/2025 01:03 pm

Cinque Terre

17.2 K

Cinque Terre

0

ಸಂಬಂಧಿತ ಸುದ್ದಿ