ಬೆಂಗಳೂರು: ಮನೆಯೇ ಮೊದಲ ಶಾಲೆ ಎನ್ನುವುದು ಹೋಗಿ ಮೊಬೈಲೇ ಮೊದಲ ಶಾಲೆಯಂತಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.
ಪ್ರೆಸ್ ಕ್ಲಬ್ ಮತ್ತು ಬಾಲ ಭವನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ "ಮಕ್ಕಳ ಜಾತ್ರೆ" ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.
ನಗರಗಳಲ್ಲಿ ಇರುವ ಮಕ್ಕಳು ಮಣ್ಣಿನಿಂದ ಬೇರ್ಪಟ್ಟು, ನೆಲದ ಆಟ ಪಾಠಗಳಿಂದ ದೂರ ಆಗಿದ್ದಾರೆ. ವೃದ್ಧಾಶ್ರಮಗಳು ಹೆಚ್ಚಾಗುತ್ತಾ ಅಜ್ಜ-ಅಜ್ಜಿ ಕತೆಗಳಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಜೊತೆಗೆ ತಮ್ಮ ಆಟದ ಸಾಮಾನುಗಳನ್ನು ತಾವೇ ಸೃಷ್ಟಿಸಿಕೊಳ್ಳುವ ಕ್ರಿಯಾಶೀಲತೆಯೂ ಕಾಣೆಯಾಗಿ, ಪ್ಲಾಸ್ಟಿಕ್ ಆಟದ ಸಾಮಾನುಗಳು, ಬ್ಯಾಟರಿ ಚಾಲಿತ ಆಟದ ಸಾಮಾನುಗಳ ಸಹವಾಸದಲ್ಲಿ ಮಕ್ಕಳ ಮನೋಲೋಕ ಹಿಗ್ಗುವ ಬದಲಿಗೆ ಕುರುಡಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಕ್ಕಳ ತಲೆಗಳೊಳಗೆ ರಾಗಿರೊಟ್ಟಿ ಬದಲಿಗೆ ಬರ್ಗರ್, ಜೋಳದ ರೊಟ್ಟಿ ಬದಲಿಗೆ ಪಿಜ್ಜಾ, ಮುದ್ದೆ ಬದಲಿಗೆ ಪಾಸ್ತಾ, ಡೋನಟ್ ತುಂಬಿದ್ದು ಕೂಡ ಕೆಟ್ಟ ಸಾಂಸ್ಕೃತಿಕ ರಾಜಕಾರಣ. ಇದನ್ನು ಬಹಳ ಆಳವಾಗಿ ಮತ್ತು ಗಂಭೀರವಾಗಿ ಯೋಚಿಸುವ ಅಗತ್ಯವಿದೆ.
ಇದನ್ನು ಜವಾಹರಲಾಲ್ ನೆಹರೂ ಅವರು ಮನಗಂಡಿದ್ದರು. ಮಕ್ಕಳ ದೃಷ್ಟಿಕೋನದಲ್ಲಿ ದೇಶದ ಅಭಿವೃದ್ಧಿ ಮತ್ತು ಪ್ರಗತಿಯ ನೀಲನಕ್ಷೆ ನೆಹರೂ ಅವರು ಸಿದ್ಧಪಡಿಸಿದ್ದರು. ಈ ನೀಲನಕ್ಷೆಯ ಭಾಗವೇ ಜವಾಹರ ಬಾಲ ಭವನ.
ಕುಟುಂಬ, ಸಮಾಜ, ಸ್ನೇಹಿತರಿಂದ ಬೇರ್ಪಡಿಸುವ ವಿಡಿಯೋ ಗೇಮ್ ಗಳು ಹಿಂಸಾತ್ಮಕ ಮನೋಭಾವ, ಕೋಪ, ಅಸಹನೆ, ಆಕ್ರಮಣಶೀಲತೆಯನ್ನು ತುರುಕುತ್ತವೆ. ಇಂಥಾ ಮನಸ್ಥಿತಿಯ ಮಕ್ಕಳು ಭವಿಷ್ಯದಲ್ಲಿ ಹೇಗೆ ರೂಪುಗೊಳ್ಳಲು ಸಾಧ್ಯ? ಹೈಸ್ಕೂಲು ಮಟ್ಟದಲ್ಲೇ Ragging ಪಿಡುಗು ಹೆಚ್ಚಾಗುತ್ತಿರುವುದಕ್ಕೆ ಏನು ಕಾರಣ ಎನ್ನುವುದನ್ನು ನಾವು ಆಲೋಚಿಸಬೇಕಿದೆ ಎಂದರು.
PublicNext
07/09/2025 05:33 pm