ಮಂಗಳೂರು: ಕೋಮುಗಲಭೆ ಪ್ರಕರಣದಲ್ಲಿ ಭಾಗಿಯಾಗಿ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರನ್ನು 26ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.
ಹಳೆಯಂಗಡಿಯ ಪಡುಪಣಂಬೂರು ನಿವಾಸಿ ಚಂದ್ರಹಾಸ್ ಕೇಶವ ಶೆಟ್ಟಿ(59) ಮತ್ತು ಮುಲ್ಕಿ ತಾಲೂಕಿನ ಪಕ್ಷಿಕೆರೆಯ ಕೆಮ್ರಾಲ್ ಗ್ರಾಮದ ನಿವಾಸಿ ಲೀಲಾಧರ್(52) ಬಂಧಿತ ಆರೋಪಿಗಳು.
1998 ಡಿಸೆಂಬರ್ 31ರಂದು ಮುಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿಯಲ್ಲಿ ನಡೆದ ಕೋಮು ಗಲಭೆ, ಬೆಂಕಿ ಹಚ್ಚಿ ನಡೆಸಿದ ಗಲಾಟೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮುಲ್ಕಿ ಪೊಲೀಸ್ ಠಾಣೆ ಅ. ಕ್ರ.𝟬𝟲/𝟭𝟵𝟵𝟵 ಕಲಂ 143, 147, 148, 436, 427 r/w 149 IPC ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪೈಕಿ ಲೀಲಾಧರ್ ಮತ್ತು ಚಂದ್ರಹಾಸ್ ಕೇಶವ ಶೆಟ್ಟಿ ಘಟನೆ ನಡೆದಾಗಿನಿಂದ ಪೊಲೀಸರಿಗೆ ಸಿಗದೇ ತಲೆ ಮರೆಸಿಕೊಂಡಿದ್ದರು. ಹಿಂದಿನ ತನಿಖಾಧಿಕಾರಿಗಳು ಇವರ ವಿರುದ್ಧ ತಲೆಮರೆಸಿಕೊಂಡಿದ್ದ ಬಗ್ಗೆ ಉಲ್ಲೇಖಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಆರೋಪಿಗಳಿಬ್ಬರು ತನಿಖಾಧಿಕಾರಿಗೆ ಸಿಗದೇ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡು ಪರಾರಿಯಾಗಿದ್ದ ಮೇರೆಗೆ ಮೂಡುಬಿದಿರೆಯ ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ CC. No 665/2014, LPC No 10/2017 ಪ್ರಕರಣವೆಂದು ಘೋಷಿಸಿತ್ತು. ಕಳೆದ 26ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಲ್‌ಪಿಸಿ ವಾರೆಂಟ್ ಅಸಾಮಿ ಲೀಲಾಧರ್ ಇತ್ತೀಚೆಗೆ ಸ್ವದೇಶಕ್ಕೆ ಬಂದು ಪಕ್ಷಿಕೆರೆ ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ.
ಈ ಬಗ್ಗೆ ದೊರೆತ ಮಾಹಿತಿ ಮೇರೆಗೆ ಮುಲ್ಕಿ ಪೊಲೀಸರು ಸೋಮವಾರ ಆತನನ್ನು ದಸ್ತಗಿರಿ ಮಾಡಿದ್ದಾರೆ. ಅದೇ ರೀತಿ ಪ್ರಕರಣದ ಇನ್ನೊಬ್ಬ ಆರೋಪಿ ಚಂದ್ರಹಾಸ್ ಕೇಶವ ಶೆಟ್ಟಿಯನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದಾರೆ. ಇಬ್ಬರನ್ನೂ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇಬ್ಬರ ವಿರುದ್ದ ಪ್ರತ್ಯೇಕವಾಗಿ 88/2025 ಮತ್ತು 94/2025 ಕಲಂ 208, 209 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
PublicNext
08/09/2025 10:19 pm