ಮಂಗಳೂರು : ನಗರದ ಕೂಳೂರಿನಲ್ಲಿ ಹೆದ್ದಾರಿ ಗುಂಡಿಗೆ ಬಿದ್ದ ಸ್ಕೂಟರ್ ಸವಾರೆಯ ಮೇಲೆ ಲಾರಿ ಹರಿದು ಆಕೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಲಾರಿ ಚಾಲಕ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಉಡುಪಿ ಪರ್ಕಳ ಮೂಲದ ಪ್ರಸ್ತುತ ಸುರತ್ಕಲ್ ಕುಳಾಯಿ ಮಾಧವಿ (44) ಅವರು ತಮ್ಮ ಸ್ಕೂಟರಿನಲ್ಲಿ ಕುಳಾಯಿ ಕಡೆಯಿಂದ ಕುಂಟಿಕಾನ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದರು. ಬೆಳಗ್ಗೆ ಸುಮಾರು 8:30ರ ಸುಮಾರಿಗೆ ಕೂಳೂರಿನ ರಾಯಲ್ ಓಕ್ ಮುಂಭಾಗ ಬರುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿದ್ದ ಗುಂಡಿಯ ಪರಿಣಾಮ ಸ್ಕೂಟರ್ ಸಮೇತ ಬಿದ್ದಿದ್ದಾರೆ.
ಈ ವೇಳೆ ಅವರ ಹಿಂದಿನಿಂದ ಉಡುಪಿ ಕಡೆಯಂದ ಮಂಗಳೂರು ಕಡೆಗೆ ಬರುತ್ತಿದ್ದ ಲಾರಿಯನ್ನು ಚಾಲಕ ಮೊಹಮ್ಮದ್ ಫಾರೂಕ್ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದಾನೆ. ಪರಿಣಾಮ ಲಾರಿಯ ಚಕ್ರವು ಮಾಧವಿಯವರ ಮೇಲೆಯೇ ಹರಿದು ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಅಪಘಾತಕ್ಕೆ ಹೆದ್ದಾರಿಯ ನಿರ್ವಾಹಣೆಯನ್ನು ಸರಿಯಾಗಿ ನಿರ್ವಹಿಸದೇ, ರಸ್ತೆಗುಂಡಿಗಳನ್ನು ಮುಚ್ಚದೇ ನಿರ್ಲಕ್ಷ್ಯವಹಿಸಿರುವುದೇ ಕಾರಣ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಹಾಗೂ ನಿರ್ಲಕ್ಷ್ಯತನದ ಚಾಲನೆ ಮಾಡಿರುವ ಲಾರಿ ಚಾಲಕನ ಮೇಲೆ ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 224/2025 ಕಲಂ 281, 106(1) ಬಿ.ಎನ್.ಎಸ್ ಮತ್ತು 198(ಎ) ಐಎಂವಿ ಕಾಯ್ದೆರಂತೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.
PublicNext
09/09/2025 08:36 pm