ಮಂಗಳೂರು: ನಗರದ ಕೂಳೂರಿನಲ್ಲಿ ರಸ್ತೆ ಗುಂಡಿಗೆ ಸವಾರೆಯೊಬ್ಬರು ಬಿದ್ದು ಲಾರಿ ಹರಿದು ಮೃತಪಟ್ಟ ಬೆನ್ನಲ್ಲೇ ಎಚ್ಚೆತ್ತ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ರಸ್ತೆ ಗುಂಡಿಯನ್ನು ಮುಚ್ಚಿ ತೇಪೆ ಹಚ್ಚಿದ್ದಾರೆ.
ಎನ್‌ಎಚ್ 66 ಸುರತ್ಕಲ್‌ನಿಂದ ಕೆಪಿಟಿವರೆಗೆ ಅಲ್ಲಲ್ಲಿ ಸಂಪೂರ್ಣ ಹೊಂಡಗುಂಡಿ ಬಿದ್ದಿದೆ. ಇತ್ತೀಚೆಗೆ ಜನರ ಆಕ್ರೋಶದಿಂದ ಕೂಳೂರು ಬ್ರಿಡ್ಜ್ ಬಳಿ ಹೆದ್ದಾರಿ ಪ್ರಾಧಿಕಾರ ಗುಂಡಿ ಮುಚ್ಚುವ ಕಾರ್ಯ ಮಾಡಿತ್ತು. ಬೇರೆ ಗುಂಡಿಗಳು ಮುಚ್ಚುವ ಗೋಜಿಗೆ ಹೋಗದ ಪರಿಣಾಮ ದ್ವಿಚಕ್ರ ಸವಾರರು ಈ ರಸ್ತೆಯಲ್ಲಿ ಹರಸಾಹಸಪಟ್ಟು ಸಂಚಾರ ನಡೆಸುತ್ತಿದ್ದಾರೆ. ಮಳೆಗಾಲಕ್ಕೆ ಮುನ್ನ ರಸ್ತೆಗಳ ಗುಂಡಿಗಳನ್ನು ಮುಚ್ಚಿ ನಿರ್ವಹಣೆ ಮಾಡಬೇಕಿದ್ದ ಎನ್ಎಚ್ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆದ್ದರಿಂದ ಮಳೆಗಾಲದಲ್ಲಿ ದೊಡ್ಡದೊಡ್ಡ ಹೊಂಡಗಳು ಸೃಷ್ಟಿಯಾಗುತ್ತಿದೆ.
ಒಂದಿಬ್ಬರು ಸವಾರರು ರಸ್ತೆ ಗುಂಡಿಗೆ ಬಲಿಯಾದ ಬಳಿಕವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ ಎಂಬುದನ್ನು ಅಧಿಕಾರಿಗಳು ಇದೀಗ ಮತ್ತೆ ಸಾಬೀತು ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ ಎ.ಜೆ.ಆಸ್ಪತ್ರೆ ಸಿಬ್ಬಂದಿ ಮಹಿಳೆಯೋರ್ವರು ಮೃತಪಟ್ಟ ಕೆಲವೇ ಕ್ಷಣಗಳಲ್ಲಿ ಕೂಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ಅಧಿಕಾರಿಗಳು ಧಾವಿಸುತ್ತಿದ್ದಾರೆ. ಈ ಕೆಲಸ ಮೊದಲೇ ಆಗುತ್ತಿದ್ದರೆ, ಒಂದು ಪ್ರಾಣವಾದರೂ ಉಳಿಯುತ್ತಿತ್ತು.
ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಡಿಸಿಪಿ ರವಿಶಂಕರ್ ಅವರು, 'ನಾವು ಎರಡೆರಡು ಬಾರಿ ಗುಂಡಿ ಮುಚ್ಚುವಂತೆ ಹೆದ್ದಾರಿ ಇಲಾಖೆಗೆ ನೋಟಿಸ್ ನೀಡಿದರೂ ಅವರು ನಿರ್ಲಕ್ಷ್ಯ ವಹಿಸಿದ್ದಾರೆ' ಎಂದು ಅಸಹಾಯಕತೆ ತೋರಿದ್ದಾರೆ. ಅಧಿಕಾರಿಗಳೇ ಇನ್ನಾದರೂ ಮೊದಲೇ ಎಚ್ಚೆತ್ತುಕೊಳ್ಳಿ. ಪ್ರಾಣಬಲಿಗಾಗಿ ಕಾಯದಿರಿ ಎಂಬುದೇ ನಮ್ಮ ಆಶಯ.
PublicNext
09/09/2025 06:04 pm